ಬೆಂಗಳೂರು: ತಮಿಳುನಾಡಿನಿಂದ ಬಂದ ಪಟಾಕಿಯನ್ನು ಲಾರಿಯಿಂದ ಇಳಿಸುವ ವೇಳೆ ಗಡಿ ಪ್ರದೇಶದ ಆನೇಕಲ್, ಅತ್ತಿಬೆಲೆಯಲ್ಲಿರುವ ದಾಸ್ತಾನು ಮಳಿಗೆಯೊಂದರಲ್ಲಿ (ಗೋದಾಮು) ಬೆಂಕಿ ಹೊತ್ತಿಕೊಂಡಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಪಟಾಕಿ ದಾಸ್ತಾನು ಮಳಿಗೆ ನಾಲ್ಕೈದು ತಾಸಿನಿಂದ ಹೊತ್ತಿ ಉರಿಯುತ್ತಿದ್ದು, ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಅಗ್ನಿ ಶಾಮಕ ದಳದ ಐದಾರು ವಾಹನಗಳು ಹಾಗೂ ಹತ್ತಾರು ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಮಳಿಗೆಯಲ್ಲಿ ಸುಮಾರು ಐದು ಕೋಟಿ ಮೌಲ್ಯದ ಪಟಾಕಿಗಳ ಸಂಗ್ರಹ ಇತ್ತು ಎನ್ನಲಾಗಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪಟಾಕಿ ಮಳಿಗೆಯಲ್ಲಿ 30-40 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಿಂಬಾಗಿಲಿನಿಂದ ಹೊರಬಂದಿದ್ದರಿಂದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಹಲವರು ಒಳಗಡೆ ಸಿಲುಕಿರುವ ಶಂಕೆ ಇದೆ.
ದಾಸ್ತಾನು ಮಳಿಗೆ, ಒಂದು ಲಾರಿ, ಒಂದು ಸರಕು ಸಾಗಣೆ ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳದಲ್ಲಿ ಪಟಾಕಿಗಳು ಇನ್ನೂ ಸಿಡಿಯುತ್ತಿದ್ದು, ಸುತ್ತಲೂ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿದೆ.
ಪಟಾಕಿ ಮಳಿಗೆ ಮಾಲೀಕ ಸೇರಿ ಐವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಾಲ್ಕೈದು ಆಂಬುಲೆನ್ಸ್ಗಳು ಬಂದಿವೆ.