ಆಂಧ್ರಪ್ರದೇಶ : ತಿರುಪತಿಯಿಂದ ದರ್ಶನ ಪಡೆದು ಹಿಂದಿರುಗುತ್ತಿದ್ದ ಭಕ್ತರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಐವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಇಂದು (ಸೆ, 15 ಶುಕ್ರವಾರ) ಮುಂಜಾನೆ ನಡೆದಿದೆ.
ಮೃತರನ್ನು ಮತ್ತು ಗಾಯಾಳುಗಳನ್ನು ಕರ್ನಾಟಕದ ಬೆಳಗಾವಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಕ್ರೂಸರ್ ವಾಹನದಲ್ಲಿ ಒಟ್ಟು 16 ಮಂದಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಅನ್ನಮಯ್ಯ ಜಿಲ್ಲೆಯ ಕೆವಿಐಪಲ್ಲಿ ಮಂಡಲದ ಮಠಂಪಲ್ಲಿ ಬಳಿ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ 11 ಜನರ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ನಸುಕಿನ ಜಾವ 2:30ರ ಸುಮಾರಿಗೆ ಅಪಘಾತ ನಡೆದಿದ್ದು, ನಿದ್ದೆ ಮಂಪರಿನಲ್ಲಿ ಚಾಲಕ ವಾಹನ ಚಲಾಯಿಸಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು.
ಈ ಭೀಕರ ರಸ್ತೆ ಅಪಘಾತದಲ್ಲಿ ಇನ್ನೂ 11 ಮಂದಿ ಗಾಯಗೊಂಡಿದ್ದಾರೆ.