ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನ ಸಾಮಾನ್ಯರು ಮಾತ್ರವಲ್ಲದೆ, ಖುದ್ದು ಪೊಲೀಸ್ ಅಧಿಕಾರಿಗಳೇ ಸೈಬರ್ ವಂಚನೆಗೆ ಒಳಗಾಗಿದ್ದು, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಒಬ್ಬರು ದೂರು ದಾಖಲಿಸಿದ್ದಾರೆ.
ಹೌದು! ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅವರ ಗಮನಕ್ಕೆ ಬರದೆ ಆನ್ಲೈನ್ಲ್ಲಿ ವರ್ಗಾವಣೆ ಮಾಡಲಾಗಿದೆ. ಕುರಿತು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿದ್ದಾರೆ.
ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ವರ್ಗಾವಣೆಯಾಗಿದೆ. ಬ್ಯಾಂಕ್ನವರು ಸೆಕ್ಯೂರ್ ಇರುವ ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದ ಸಂದರ್ಭ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರದಂತೆ 12 ಬಾರಿ, 45 ಸಾವಿರ ಮೂರು ಬಾರಿ, 25 ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡಿರುವ ವಂಚಕರು ಇನ್ಸ್ಪೆಕ್ಟರ್ ನಾಮ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಇನ್ಸ್ಪೆಕ್ಟರ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬ್ಯಾಂಕ್ ನಿಷ್ಕಾಳಜಿಯಿಂದಲೂ ಆಗಿರಬಹುದು. ಅಥವಾ ಹೊಸ ಬಗೆಯ ಸೈಬರ್ ಕ್ರೈಂ ಹುಟ್ಟಿಕೊಂಡಿದೆಯ ಎಂಬ ಅನುಮಾನ ಶುರುವಾಗಿದೆ.