ಬೆಂಗಳೂರು: ಕೆವಿನ್ ಪ್ರೊಡಕ್ಷನ್ಸ್ ಸಂಸ್ಥೆಯ ಬಿಗ್ ಅನೌನ್ಸಮೆಂಟ್ ಹೊರಬಿದ್ದಿದೆ. ದರ್ಶನ್ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಪ್ರೇಮ್ ನಡುವೆ ಕ್ಷುಲಕ ಕಾರಣಕ್ಕೆ ಕಿರಿಕ್ ಆಗಿತ್ತು. ದರ್ಶನ್ ಜೊತೆ ಮತ್ತೆ ಸಿನಿಮಾ ಮಾಡಲ್ಲ ಎಂದಿದ್ದರು ಪ್ರೇಮ್.
ಈಗ ಮುನಿಸು ಮರೆತು ಇಬ್ಬರು ಒಂದಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆವಿನ್ ಪ್ರೊಡಕ್ಷನ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಕೈಹಾಕಿದೆ. ಈಗಾಗಲೇ ಧ್ರುವ ಜೋಗಿ
ಪ್ರೇಮ್ ಕಾಂಬಿನೇಷನ್ನಲ್ಲಿ ‘KD’ ಸಿನಿಮಾ ನಿರ್ಮಾಣವಾಗುತ್ತಿದೆ. ಅದರ ಬೆನ್ನಲ್ಲೇ ಮತ್ತೊಂದು ಚಿತ್ರವನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಬಾರಿ ದರ್ಶನ್- ಪ್ರೇಮ್ ಇಬ್ಬರನ್ನು ಒಂದು ಮಾಡಿ ಭಾರೀ ಪ್ರಾಜೆಕ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ದರ್ಶನ್- ಪ್ರೇಮ್ ಕಾಂಬಿನೇಷನ್ ಸಿನಿಮಾ ಬಗ್ಗೆ ಸುಳಿವು ಸಿಕ್ಕಿತ್ತು. ಅದು ಈಗ ಕನ್ನರ್ಮ್ ಆಗಿದೆ.
ನಿರ್ಮಾಪಕ ವೆಂಕಟ್ ಕೋನಂಕಿ ಹುಟ್ಟುಹಬ್ಬದ ಸಂಭ್ರಮದಲ್ಲೇ ದರ್ಶನ್ ಪ್ರೇಮ್ ಜೋಡಿಯ ಸಿನಿಮಾ ಘೋಷಣೆಯಾಗಿದೆ. ಸದ್ಯ ದರ್ಶನ್’ಕಾಟೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಳಿಕ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ನಟಿಸೋ ಸಾಧ್ಯತೆಯಿದೆ. ಆದರೆ ಪ್ರೇಮ್ ನಿರ್ದೇಶನದ ಸಿನಿಮಾ ಯಾವಾಗ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ದಶಕಗಳ ಹಿಂದೆ ಪ್ರೇಮ್ ನಿರ್ದೇಶನದ ‘ಕರಿಯ’ ಚಿತ್ರದಲ್ಲಿ ದರ್ಶನ್ ನಟಿಸಿ ಗೆದ್ದಿದ್ದರು. ಸೂಪರ್ ಹಿಟ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮೂಡಿ ಬರಲಿದೆ.
ಕೆವಿಎನ್ ಸಂಸ್ಥೆ ಮೊದಲಿಗೆ ಗಣೇಶ್ ನಟನೆಯ ‘ಸಖತ್ ಸಿನಿಮಾ ನಿರ್ಮಾಣ ಮಾಡಿತ್ತು. ಬಳಿಕ ‘ಬೈಟು ಲವ್’ ಸಿನಿಮಾ ಕೂಡ ಅದೇ ಬ್ಯಾನರ್ನಲ್ಲಿ ತೆರೆಗೆ ಬಂದಿತ್ತು. ಅಲ್ಲಿಂದ ಮುಂದೆ ‘RRR’ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಈ ಸಂಸ್ಥೆ ವಿತರಣೆ ಮಾಡಿದೆ. ಹೊಂಬಾಳೆ ಫಿಲ್ಸ್ ನಂತರ ಕನ್ನಡ ಚಿತ್ರರಂಗದ ಮತ್ತೊಂದು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. ಸದ್ಯ ಧ್ರುವ ಸರ್ಜಾ ನಟನೆಯ ‘ಕೊಡಿ’ ಚಿತ್ರವನ್ನು ಇದೇ ಸಂಸ್ಥೆ ನಿರ್ಮಿಸುತ್ತಿದೆ. ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
‘ಕೆಡಿ’ ಸಿನಿಮಾ ತೆರೆಗೆ ಬರುವುದಕ್ಕು ಮುನ್ನ ದರ್ಶನ್ ಹೀರೊ ಆಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತೆಲುಗು ನಟ ರಾಮ್ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ಕೂಡ ಸಂಸ್ಥೆ ಚರ್ಚೆ ನಡೆಸುತ್ತಿದೆ. ಯಶ್19 ಸಿನಿಮಾ ಕೂಡ ಇದೇ ಬ್ಯಾನರ್ನಲ್ಲಿ ಮೂಡಿ ಬರುತ್ತದೆ ಎನ್ನಲಾಗುತ್ತಿದೆ. ಆದರೆ ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ದರ್ಶನ್, ಪ್ರೇಮ್ ಹಾಗೂ ನಿರ್ಮಾಪಕರಾದ ವೆಂಕಟ್ ಕೋನಂಕಿ ಚರ್ಚಿಸಿ ಸಿನಿಮಾ ಫೈನಲ್ ಮಾಡಿದ್ದಾರೆ. ಈ ವೇಳೆ ಪ್ರೇಮ್ ಪತ್ನಿ, ನಟಿ ರಕ್ಷಿತಾ ಕೂಡ ಹಾಜರಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಸ್ಪೆಷಲ್ ಪೋಸ್ಟರ್ಗಳನ್ನು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗಿತ್ತು. ಪೋಸ್ಟರ್ಗಳನ್ನು ಗಮನಿಸಿದರೆ ಐತಿಹಾಸಿಕ ಕಥಾಹಂದರ ಸಿನಿಮಾ ಎನ್ನುವಂತೆ ಕಾಣುತ್ತಿದೆ. ಯುದ್ಧ, ಹೋರಾಟದ ಸನ್ನಿವೇಶಗಳು ಸಿನಿಮಾದಲ್ಲಿ ಇರುವ ಸಾಧ್ಯತೆಯಿದೆ.
ಜೋಗಿ ಪ್ರೇಮ್ ಈಗಾಗಲೇ ‘KD’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುತ್ತಿದ್ದಾರೆ. ದರ್ಶನ್ ಜೊತೆಗಿನ ಸಿನಿಮಾ ಕೂಡ 5 ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ತೆರೆಗೆ ಬರಲಿದೆ. ಕೆವಿಎನ್ ಸಂಸ್ಥೆ ಯಾವುದೇ ವಿಚಾರದಲ್ಲೂ ರಾಜಿಯಾಗದೇ ಸಿನಿಮಾ ನಿರ್ಮಾಣ ಮಾಡಲಿದೆ. ಹಾಗಾಗಿ
ದರ್ಶನ್ – ಪ್ರೇಮ್ ಕಾಂಬೋ ಪ್ರಾಜೆಕ್ಟ್ 100 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ತಯಾರಾಗುವ ನಿರೀಕ್ಷೆಯಿದೆ. ಇಬ್ಬರಿಗೂ ಭರ್ಜರಿ ಸಂಭಾವನೆ ಕೂಡ ಸಿಗಲಿದೆ.
ದರ್ಶನ್ ‘ಕಾಟೇರ’ ಶೂಟಿಂಗ್ ಮುಗಿಸಬೇಕಿದೆ. ಅತ್ತ ಪ್ರೇಮ್ ‘KD’ಯನ್ನು ತೆರೆಗೆ ಕರೆದುಕೊಂಡುಬರಬೇಕಿದೆ. ‘ಕಾಟೇರ’ ನಂತರ ದರ್ಶನ್ ಈ ಸಿನಿಮಾನೇ ಕೈಗೆತ್ತಿಕೊಳ್ಳುತ್ತಾರಾ? ಅನ್ನುವುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ ‘ಕರಿಯ’ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರ್ತಿರೋದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.