ಕರ್ನಾಟಕ : ಕೋವಿಡ್ ನಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳನ್ನು ತನಿಖೆ ನಡೆಸಲು ಈ ಹಿಂದೆ ಚುನಾವಣೆ ವೇಳೆ ಭರವಸೆ ನೀಡುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆಗಳು, ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳಿಗೆ ಸಂಬಂಧಪಟ್ಟಂತೆ 2021 ರ ಜುಲೈ-ಆಗಸ್ಟ್ನಲ್ಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನಾಧರಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಈ ತನಿಖೆ ಹಿಂದೆ ಯಾರನ್ನೂ ಗುರಿ ಮಾಡುವ ಉದ್ದೇಶ ಇಲ್ಲ. ಭ್ರಷ್ಟಾಚಾರದ ಬಗ್ಗೆ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸುವುದಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಾಕ್ಷ್ಯಗಳಿವೆ. ಅದನ್ನು ತನಿಖೆಗೊಳಪಡಿಸಿ ಲೋಪದೋಷಗಳನ್ನು ಸರಿಪಡಿಸಬೇಕಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಮೂಲಕ ಮುಂದೆ ಈ ರೀತಿ ಅಕ್ರಮಗಳು ನಡೆಯದಂತೆ ಕ್ರಮ ಕೈಗೊಳ್ಳುವ ಕಾರಣಕ್ಕೆ ತನಿಖೆಗೆ ಆದೇಶಿಸಲಾಗಿದೆ ಎಂದರು.
ತನಿಖಾ ಸಮಿತಿಯು ಮೂರು ತಿಂಗಳಳೊಗಾಗಿ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40 ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಗಂಭೀರ ಸ್ವರೂಪದ ಆರೋಪದ ತನಿಖೆಗೂ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯು ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದರು.