ಹಾಸನ : ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ದಂಪತಿಯ ಪುತ್ರನೇ ಪೋಷಕರಿಗೆ ಆಹಾರದಲ್ಲಿ ವಿಷಹಾಕಿ ಕೊಂದಿರುವ ಆಘಾತಕಾರಿ ವಿಷಯ ಪೊಲೀಸ್ ತನಿಖೆ ವೇಳೆ ಹೊರಬಿದ್ದಿದೆ. ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ.
ಇವನ ವಯಸ್ಸು ಇನ್ನೂ 27 ವರ್ಷ. ತಂದೆ-ತಾಯಿಗೆ ವಿಷ ಹಾಕಿ ಕೊಂದಿರುವ ಆರೋಪ ಇವನ ಮೇಲಿದೆ.
ಅರಕಲಗೂಡು ತಾಲೂಕಿನ, ಬಿಸಿಲಹಳ್ಳಿ ಗ್ರಾಮದ ಉಮಾ (48), ನಂಜುಂಡಪ್ಪ (55) ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ಮಾಡಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಆಗಸ್ಟ್ 24 ರಂದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದರು. ದಂಪತಿಗಳ ಹಠಾತ್ ಸಾವಿನ ಬಗ್ಗೆ ದಂಪತಿಯ ಕಿರಿಯ ಪುತ್ರ ಕೊಣನೂರು ಪೊಲೀಸರಿಗೆ ಮಾಹಿತಿ ನೀಡಿದ್ದ. ಮೃತ ದಂಪತಿಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಪೊಲೀಸರು ಆಗಮಿಸಿ ಅಂತ್ಯಕ್ರಿಯೆ ತಡೆದು ಕುಟುಂಬದ ಸದಸ್ಯರ ಮನವೊಲಿಸಿ ಬಳಿಕ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ದಂಪತಿ ದೇಹದಲ್ಲಿ ಕಳೆನಾಶಕ ಪತ್ತೆಯಾಗಿತ್ತು. ಬಳಿಕ ಅನುಮಾನದ ಮೇಲೆ ಮೃತ ದಂಪತಿ ಎರಡನೇ ಪುತ್ರ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಂದೆ-ತಾಯಿಗೆ ವಿಷಹಾಕಿ ಕೊಲೆ ಮಾಡಿರುವ ವಿಷಯ ಬಯಲಾಗಿದೆ.
- ಅಕ್ರಮ ಸಂಬಂಧವೇ ಕಾರಣ ಎಂಬ ಶಂಕೆ
ವಿಧವೆಯೊಬ್ಬಳ ಜೊತೆ ಮಂಜುನಾಥ್ ಅಕ್ರಮ ಸಂಬಂಧ ಹೊಂದಿದ್ದ. ಇದಕ್ಕೆ ತಾಯಿ ಉಮಾ ವಿರೋಧ ವ್ಯಕ್ತಪಡಿಸುತ್ತಿದ್ದರು. ಜೊತೆಗೆ ತಾಯಿ ಸಹಕಾರ ಸಂಘಗಳಲ್ಲಿ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡಿದ್ದ. ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ನೀಡುವಂತೆ ಪದೇಪದೇ ತಾಯಿ ಒತ್ತಾಯಿಸುತ್ತಿದ್ದರಿಂದ ಕೋಪಗೊಂಡು ತಾಯಿಯ ಹತ್ಯೆಗೆ ಸಂಚು ರೂಪಿಸಿದ್ದ.
- ಪಲಾವ್ಗೆ ಕಳೆನಾಶಕ ಬೆರೆಸಿದ್ದ ಅನುಮಾನ
ಆಗಸ್ಟ್ 15 ರಂದು ಮನೆಯಲ್ಲಿ ಉಮಾ ಅವರು ಬೆಳಗ್ಗೆ ತಿಂಡಿಗೆ ಪಲಾವ್ ಮಾಡಿದ್ದರು. ತಂದೆ, ತಾಯಿಗಿಂತ ಮಂಜುನಾಥ್ ಮೊದಲೇ ತಿಂಡಿ ತಿಂದು ಆನಂತರ ಪಲಾವ್ಗೆ ಕಳೆನಾಶಕ ಬೆರೆಸಿದ್ದ. ಅಲ್ಲದೆ ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ ಬಳಿಕ ದಂಪತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಪೊಲೀಸರ ವಿಚಾರಣೆ ವೇಳೆ ಪೋಷಕರನ್ನೇ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟು ಜೈಲು ಸೇರಿದ್ದಾನೆ.