ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ನಾಯಕರ ನಡುವೆ ಅಸಮಾಧಾನ ಭುಗಿಲೆದಿದ್ದು, ಪದೇ ಪದೇ ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಶಾಸಕ ಎಂ ಪಿ ರೇಣುಕಾರ್ಚಾಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನ ಜೈಲಿಗೆ ಕಳುಹಿಸಿದ್ದೇ ಬಿಜೆಪಿ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.
ಯಡಿಯೂರಪ್ಪ ಅವರ ವಿರುದ್ದ ಪಕ್ಷದವರೇ ಪಿತೂರಿ ನಡೆಸಿದ್ದು,ಲೋಕಾಯುಕ್ತಕ್ಕೂ ದೂರು ಕೊಟ್ಟರು. ಯಡಿಯೂರಪ್ಪ ನಿರಪರಾಧಿ ಎಂದು ಹೇಳಿದರು.
ಲಿಂಗಾಯತರ ಬಣ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ. ಪಕ್ಷದ ಕಚೇರಿಯಿಂದ ಯಾರೋ ಕರೆ ಮಾಡಿ ಮೀಟಿಂಗ್ ಗೆ ಕರೆಯುತ್ತಾರೆ. ಬೇಷರತ್ತಾಗಿ ನೋಟಿಸ್ ವಾಪಸ್ ಪಡೆಯಲಿ. ನಾನು ಯಾವುದೇ ಕಾರಣಕ್ಕು ಪಕ್ಷ ಬಿಡಲ್ಲ ಎಂದ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನ ಮೂಲೆಗುಂಪು ಮಾಡುವ ಕೆಲಸ ಆಗುತ್ತಿದೆ. ವಿಧಾನ ಸಭೆ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ಕೊಟ್ಟರು, ತಮ್ಮದೇ ಬಣ ಸೃಷ್ಟಿಸಿಕೊಂಡು ಸಿಎಂ ಆಗುವ ಯತ್ನ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಬಿ ಎಲ್ ಸಂತೋಷ್ ವಿರುದ್ದ ಕಿಡಿಕಾರಿದರು.
ಕೆಲಸಕ್ಕೆ ಬಾರದವರು ಬಿಜೆಪಿ ಕಚೇರಿ ನಡೆಸುತ್ತಿದ್ದಾರೆ. ಇಂತಹವರಿಂದಲೇ ವಾಜಪೇಯಿ ಅವರು ಪ್ರಧಾನಿ ಆಗುವುದು ತಪ್ಪಿತು, ಲಿಂಗಾಯತರ ವಿರೋಧ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಲಕ್ಷ್ಮಣ್ ಸವದಿಗೆ ಟಿಕೆಟ್ ತಪ್ಪಿಸಿದ್ದೇ ಇವರು. ಹಿಂದೆ ಪಕ್ಷ ಕಟ್ಟಲು ದಿ.ಅನಂತಕುಮಾರ್ ಮಾತ್ರ ಸಾತ್ ಕೊಟ್ಟಿದ್ದು, ಇವರ ಪ್ರಣಾಳಿಕೆಯಿಂದಲೇ ಪಕ್ಷಕ್ಕೆ ಸೋಲಾಗಿದೆ ಎಂದು ಪಕ್ಷದ ನಾಯಕರ ವಿರುದ್ದ ಕಿಡಿಕಾರಿದ ಅವರು, ಆತ್ಮಾವಲೋಕನದ ಅಗತ್ಯ ಇಲ್ಲ. ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು. ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎಂದು ಕೆಲವರಿಂದ ಹೇಳಿಸುತ್ತಿದ್ದಾರೆ ಎಂದು ಹೇಳಿದರು.