ಕಲಬುರಗಿ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇರೆಗೆ ಲಾಡ್ಡಾಪುರ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರಭುಕಾಂತ ಧನ್ನಾ ಎಂಬಾತನನ್ನು ವಾಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರಭುಕಾಂತ ಹಲವು ದಿನಗಳಿಂದ ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
‘ನಾನು ಹೇಳಿದಂತೆ ಕೇಳದಿದ್ದರೆ ನಿಮ್ಮ ಅಂತರಿಕ ಅಂಕ ಕಡಿತ ಮಾಡುತ್ತೇನೆ’ ಎಂದು ವಿದ್ಯಾರ್ಥಿನಿಯರಿಗೆ ಬೆದರಿಸುತ್ತಿದ್ದ.
ವಿದ್ಯಾರ್ಥಿನಿಯರ ಅಂಗಾಂಗ ಸ್ಪರ್ಶಿಸುತ್ತಿದ್ದ. ಇದನ್ನು ಸಹಿಸಿಕೊಳ್ಳದ ವಿದ್ಯಾರ್ಥಿನಿಯರು ಗ್ರಾಮಸ್ಥರಿಗೆ ದೂರು ನೀಡಿದ್ದರು. ಗ್ರಾಮಸ್ಥರು, ಪೋಷಕರು ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ದುರ್ವತ್ರನೆ ತಿದ್ದಿಕೊಳ್ಳದೇ ಮತ್ತೆ ಕಿರುಕುಳ ಮುಂದುವರಿಸಿದ್ದ. ಈ ಕುರಿತು ಗ್ರಾಮಸ್ಥರು ಶಿಕ್ಷಣ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ನಂತರ ಶಾಲೆಗೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಸಿಪಿಐ ಪ್ರಕಾಶ ಯಾತನೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಸುದೀರ್ಘ ವಿಚಾರಣೆ ನಡೆಸಿದರು.
ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಅಧಿಕಾರಿಗಳು ಶಾಲೆಯಲ್ಲಿಯೇ ಬೀಡುಬಿಟ್ಟಿದ್ದರು. ವಿದ್ಯಾರ್ಥಿನಿಯರು ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಎದುರು ತಾವು ನಿತ್ಯ ಅನುಭವಿಸುತ್ತಿದ್ದ ಗೋಳು ತೋಡಿಕೊಂಡರು.
ತಕ್ಷಣವೇ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲು ಎಸ್ಪಿ ಇಶಾ ಪಂತ್ ಅವರು ಸಿಪಿಐಗೆ ಆದೇಶಿಸಿದರು. ಆರೋಪಿಯನ್ನು
ಬಂಧಿಸಲಾಗಿದ್ದು, ಪೋಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಪ್ರಭುಕಾಂತ ಧನ್ನಾ ಕಳೆದ ಮೂರು ವರ್ಷಗಳಿಂದ ಲಾಡ್ಲಾಪುರ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಪ್ರಭಾರ ಮುಖ್ಯ ಶಿಕ್ಷಕನಾಗಿ ನಿಯೋಜಿತನಾಗಿದ್ದ ಎಂದು ಮೂಲಗಳು ತಿಳಿಸಿವೆ.