ತಮಿಳುನಾಡು: ಒಂದೇ ಕುಟುಂಬದ ನಾಲ್ವರನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಲ್ಲಡಂ ಸಮೀಪದ ಕಲ್ಲಕಿನಾರು ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರನ್ನ ಪ್ರಶ್ನಿಸಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆಯಾದವರನ್ನ ರೈತ ಸೆಂಥಿಲ್ಕುಮಾರ್, ಮೋಹನರಾಜ್, ಪುಷ್ಪಾವತಿ ಮತ್ತು ರತ್ನಾಂಬಳ್ ಎಂದು ಗುರುತಿಸಲಾಗಿದೆ.
ಅಕ್ಕಿ ವ್ಯಾಪಾರ ಮಾಡುತ್ತಿದ್ದ ಸೆಂಥಿಲ್ಗೆ ಭಾನುವಾರ ಸಂಜೆ 7ರ ಸುಮಾರಿಗೆ ಯಾರೋ ಜಮೀನಿನಲ್ಲಿ ಉಳಿತು ಮದ್ಯಸೇವನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜಮೀನಿಗೆ ತೆರಳಿ ತನ್ನ ಜಮೀನಿನಲ್ಲಿ ಮದ್ಯ ಸೇವನೆ ಮಾಡಬಾರದು ಎಂದು ತಾಕೀತು ಮಾಡಿದ್ದರೆ. ಈ ವೇಳೆ ಮದ್ಯದ ನಶೆಯಲ್ಲಿ ಕುಡುಗೋಲಿನಿಂದ ಸೆಂಥಿಲ್ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ತಪ್ಪಿಸಲು ಬಂದ ಇನ್ನೂ ಮೂವರ ಮೇಲೆ ದಾಳಿ ನಡೆಸಿದ್ದು ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಮಾಹಿತಿ ತಿಳಿದು ಸ್ಥಳ್ಕಕೆ ಆಗಮಿಸಿದ ಪಲ್ಲಡಂ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವಾಗ ಗ್ರಾಮಸ್ಥರು ಪಲ್ಲಡಂ-ಧಾರಾಪುರ ರಸ್ತೆ ಬಂದ್ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪ್ರತಿಭಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.