ಮಂಡ್ಯ : ಮಂಡ್ಯದಲ್ಲಿ ಹೈಟೆಕ್ ಜಾನುವಾರು ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ ಮಾಡಿ ಹೈನೋದ್ಯಮ ಆರಂಭಿಸಿದ್ದ ಚಾಲಾಕಿ ಕಳ್ಳ ಚಾಕೇನಹಳ್ಳಿ ಗ್ರಾಮದ ರವಿಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಾನೊಬ್ಬ ಜಾನುವಾರು ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದ ರವಿಗೌಡ, ಹಗಲು ವೇಳೆ ಪ್ಲಾನ್ ಮಾಡಿ, ರಾತ್ರಿ ವೇಳೆ ಹಸು, ಎಮ್ಮೆ ಕಳ್ಳತನ ಮಾಡುತ್ತಿದ್ದ. ಕದ್ದ ಹಸು, ಎಮ್ಮೆಯನ್ನು ತನ್ನ ಫಾರಂನಲ್ಲಿಯೇ ಸಾಕಾಣಿಕೆ ಮಾಡುತ್ತಿದ್ದ. ಬಳಿಕ ಹಂತ ಹಂತವಾಗಿ ಜಾನುವಾರುಗಳ ಮಾರಾಟ ಮಾಡುತ್ತಿದ್ದ.
ತಿಂಗಳ ಹಿಂದೆ ರವಿಗೌಡ ಅಂಡ್ ಗ್ಯಾಂಗ್ ಹಲಗೂರು, ಚನ್ನಪಟ್ಟಣ, ಚನ್ನರಾಯಪಟ್ಟಣ ಭಾಗದಲ್ಲಿ ಹಸುಗಳ ಕಳ್ಳತನ ಮಾಡಿತ್ತು. ಈ ಸಂಬಂಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳೀಯರ ಮಾಹಿತಿ ಮೇರೆಗೆ ಬೆಳ್ಳೂರು ಪೊಲೀಸರ ಸಹಕಾರದೊಂದಿಗೆ ಕೆ.ಆರ್.ಪೇಟೆ ಪೊಲೀಸರು, ಫಾರಂ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಕದ್ದ ಹಸು, ಎಮ್ಮೆಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಪೊಲೀಸರ ಕಾರ್ಯವನ್ನು ನೊಂದಿದ್ದ ರೈತರು ಶ್ಲಾಘಿಸಿದ್ದಾರೆ.
ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ರವಿಗೌಡ ಕಳ್ಳತನ ಮಾಡಿದ್ದು, ಸಂಬಂಧ ಕೆ.ಆರ್.ಪೇಟೆ ಪೊಲೀಸರು ರವಿಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹಲವೆಡೆ ಕಳ್ಳತನ ಮಾಡಿದ್ದ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.