ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ‘ಯುಐ’ ಚಿತ್ರದ ಟೀಸರ್ ಗೆ ಕಾಯುತ್ತಿದ್ದ ಅಪಾರ ಅಭಿಮಾನಿಗಳಿಗೆ ಉಪ್ಪಿ ಟೀಸರ್ ಬಿಟ್ಟು ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಆದರೆ ಟೀಸರ್ ನೋಡಿದವರು ಬರೀ ಕತ್ತಲೆ ಕತ್ತಲೇ, ಎನ್ನುತ್ತಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ಉಪೇಂದ್ರ ಅವರ ನಿರ್ದೇಶನಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ.
ಅವರ ನಿರ್ದೇಶನದ ಸಿನಿಮಾಗಳನ್ನು ನೋಡುವ ಪ್ರೇಕ್ಷಕರ ವರ್ಗವೇ ಇದೆ. ಬಹು ಸಮಯದ ಬಳಿಕ ಉಪೇಂದ್ರ ಅವರು ʼಯುಐʼ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ತಲೆಗೆ ಹುಳ ಬಿಡುವುದರಲ್ಲಿ ಉಪೇಂದ್ರ ಅವರನ್ನು ಬೀಟ್ ಮಾಡಿದವರಿಲ್ಲ.
ಟೀಸರ್ ಬಿಡಲ್ಲ ನೇರವಾಗಿ ಸಿನಿಮಾ ನೋಡಿ ಎಂದು ಉಪ್ಪಿ ಹೇಳಿದ್ದರು. ಇಲ್ಲ ನಮಗೆ ಟೀಸರ್ ಬೇಕೆಂದು ಅಭಿಮಾನಿಗಳ ಅವರ ನಿವಾಸದ ಮುಂದೆ ಜಮಾಯಿಸಿದ್ದ ವಿಡಿಯೋವನ್ನು ಚಿತ್ರತಂಡ ಬಿಟ್ಟಿತ್ತು. ಅದರಂತೆ ಉಪೇಂದ್ರ ಅವರು ಬಹು ನಿರೀಕ್ಷೆಯ ಟೀಸರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಅಪಾರ ಅಭಿಮಾನಿಗಳ ಮುಂದೆ ರಿಲೀಸ್ ಮಾಡಿದ್ದಾರೆ.
ಆದರೆ ಟೀಸರ್ ನೋಡಿದವರು ಬರೀ ಕತ್ತಲೆ ಕತ್ತಲೆ… ಎನ್ನುತ್ತಿದ್ದಾರೆ. ಮಾಸ್ ಟೀಸರ್ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಗಳು ಮಾಸ್ ಸೌಂಡ್ ಕೇಳಿಯೇ ದೃಶ್ಯವನ್ನು ಫೀಲ್ ಮಾಡಿಕೊಂಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ಇಂಥದ್ದೊಂದು ವಿಭಿನ್ನ ರೀತಿಯ ಟೀಸರ್ ಉಪ್ಪಿ ʼಯುಐʼ ಮೂಲಕ ತೋರಿಸಿದ್ದಾರೆ.
ಟೀಸರ್ ನಲ್ಲಿ ಯಾವ ದೃಶ್ಯವೂ ಇಲ್ಲ. ಬರೀ ಕತ್ತಲೆಯನ್ನು ತೋರಿಸಿದ್ದಾರೆ. ಹಿನ್ನೆಲೆಯಲ್ಲಿ ಮಾಸ್ ವಾಯ್ಸ್ ಇದೆ ಅಷ್ಟೇ. ಇದು ʼಎಐʼ ವರ್ಲ್ಡ್ ಅಲ್ಲ, ಯʼಯುಐʼ ವರ್ಲ್ಡ್.. ಈ ಟೀಸರ್ ನಿಮ್ಮ ಕಲ್ಪನೆಗೆ ಬಿಟ್ಟದ್ದೆಂದು ಟೀಸರ್ ನಲ್ಲಿ ಕೊನೆಯದಾಗಿ ತೋರಿಸಲಾಗಿದೆ.
ಸದ್ಯ ಪ್ಯಾನ್ ಇಂಡಿಯಾದಲ್ಲಿ ಉಪ್ಪಿ ಅವರ ʼಯುಐʼ ಟೀಸರ್ ವೈರಲ್ ಆಗಿದ್ದು, ಇದರ ಚರ್ಚೆ ಎಲ್ಲೆಡೆ ನಡೆಯುತ್ತಿದೆ.