ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಲು ಸಚಿವ ಎಂಬಿ ಪಾಟೀಲ ಸೂಚನೆ ನೀಡಿದ್ದಾರೆ. ಅಂತೆಯೇ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ 2024 ಫೆಬ್ರವರಿಯಲ್ಲಿ ವಿಮಾನ ಹಾರಾಟ ಆರಂಭಿಸಬೇಕು ಎಂದು ಗಡುವ ನೀಡಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನೆಲ್ಲ ನವೆಂಬರ್ ಹೊತ್ತಿಗೆ ಮುಗಿಸಬೇಕು. ಬಳಿಕ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೇರಿದಂತೆ ಎಲ್ಲ ಕಡೆಗಳಿಂದ ಅನುಮತಿ ಪಡೆದು, 2024ರ ಫೆಬ್ರುವರಿ ವೇಳೆಗೆ ವಿಮಾನ ನಿಲ್ದಾಣ ಉದ್ಘಾಟನೆ ಆಗಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಗಡುವು ನೀಡಿದ್ದಾರೆ.
ಗುರುವಾರ ಇಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿ ಕುರಿತು ವಿಸ್ತ್ರತ ಸಭೆ ನಡೆಸಿದ ಅವರು, ಉದ್ಘಾಟನೆಯ ದಿನದಿಂದಲೇ ವಿಮಾನಗಳ ಹಾರಾಟ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಈಗಿನಿಂದಲೇ ವಿಮಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ತಾಕೀತು ಮಾಡಿದರು.
ವಿಜಯಪುರ ವಿಮಾನ ನಿಲ್ದಾಣ ಯೋಜನೆಯ ಮೂಲದಲ್ಲಿ ರಾತ್ರಿ ಹೊತ್ತು ವಿಮಾನ ಇಳಿಯಲು ಸೌಲಭ್ಯವಿರಲಿಲ್ಲ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ನೈಟ್ ಲ್ಯಾಂಡಿಂಗಿಗೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 7.25 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಇದಕ್ಕಾಗಿ 54.50 ಕೋಟಿ ರೂ. ವೆಚ್ಚವಾಗಲಿದೆ. ಇವೆರಡಕ್ಕೂ ಅಗತ್ಯವಿರುವ 5.50 ಎಕರೆ ಭೂಸ್ವಾಧೀನವನ್ನು ತ್ವರಿತವಾಗಿ ಮುಗಿಸಬೇಕು. ಯೋಜನೆಯ ವೆಚ್ಚದಲ್ಲಿ 6 ಕೋಟಿ ರೂ.ಗಳನ್ನು ಭೂಸ್ವಾಧೀನಕ್ಕೆ ಮೀಸಲಿಡಲಾಗಿದೆ ಎಂದು ಅವರು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಒಟ್ಟು 727 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತುತ್ತಿರುವ ವಿಮಾನ ನಿಲ್ದಾಣಕ್ಕೆ 347.92 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಈ ಪೈಕಿ ಈ ವರ್ಷದ ಆಗಸ್ಟ್ ತಿಂಗಳವರೆಗೆ 303.70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗ ಮುಂದಿನ 2 ತಿಂಗಳಲ್ಲಿ ಭದ್ರತಾ ಮತ್ತು ಅಗ್ನಿಶಾಮಕ ಸಿಬ್ಬಂದಿ, ವಿಮಾನ ನಿಲ್ದಾಣ ನಿರ್ದೇಶಕರು ಮತ್ತು ಟರ್ಮಿನಲ್ ಮ್ಯಾನೇಜರ್ ನೇಮಕಾತಿ ಹಾಗೂ ವಾಹನಗಳ ಖರೀದಿ ಮುಗಿಸಬೇಕು ಎಂದು ಸಚಿವರು ತಿಳಿಸಿದರು.