ಬೆಂಗಳೂರು: ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ವಿಜಯ್ಕುಮಾರ್ ಅಲಿಯಾಸ್ ಡಿಯೊ ಪುಟ್ಟ, ಚಿರಾಗ್ ಗೌಡ ಅಲಿಯಾಸ್ ರಿಚಿ ಹಾಗೂ ರವಿಕುಮಾರ್ ಬಂಧಿತರು.
ಇವರಿಂದ 15 ಗ್ರಾಂ ತೂಕದ ಚಿನ್ನದ ಸರ, 3 ಮೊಬೈಲ್ ಹಾಗೂ ಡ್ಯಾಗರ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಇತ್ತೀಚೆಗೆ ನುಗ್ಗಿದ್ದ ಆರೋಪಿಗಳು, ಮಹಿಳೆಗೆ ಡ್ಯಾಗರ್ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸುಲಿಗೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.
‘ಮೂವರು ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರು. ಮತ್ತಷ್ಟು ಕಡೆ ಸುಲಿಗೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.