ದಾವಣಗೆರೆ: ಕುಂದುವಾಡ ರಸ್ತೆಯ ಬಾಲಾಜಿ ಲೇಔಟ್ನ ಮನೆಯೊಂದರಲ್ಲಿ ಒಂಟಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸ್ಪಿಎಸ್ ನಗರ ಬೂದಾಳ್ ರಸ್ತೆಯ ಎಂ.ಮುಬಾರಕ್ ಆಲಿಯಾಸ್ ಬಾಬು ಆಲಿಯಾಸ್ ಸಾಹಿಲ್ ಬಂಧಿತ ಆರೋಪಿ.
ಸುಲಿಗೆ ಮಾಡಿದ್ದ 2.17 ಲಕ್ಷ ನಗದು, ದೋಚಿದ್ದ ಹಣದಲ್ಲಿ ಖರೀದಿಸಿದ್ದ 26 ಸಾವಿರ ರೂ. ಬೆಲೆಯ ವಿಮೋ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪತ್ರ ಬರಹಗಾರ ಶ್ರೀನಾಥ್ ಅವರ ಮನೆಯಲ್ಲಿ ಸೆ.13ರಂದು ಹಾಡಹಗಲೇ ಈ ಪ್ರಕರಣ ನಡೆದಿತ್ತು. ಶ್ರೀನಾಥ್ ಪತ್ನಿ ಯೋಗೀಶ್ವರಿ ಮಗ ಸಮರ್ಥನಿಗೆ ತಿಂಡಿ ನೀಡಿ, ಮನೆಯ ಹೊರಗೆ ಒಣಗಿಸಲು ಇರಿಸಿದ್ದ ಕೊಬ್ಬರಿ ತುಂಡುಗಳನ್ನು ನೋಡಲು ತೆರಳಿದ್ದಾಗ ಮನೆಯೊಳಗೆ ಆರೋಪಿ ನುಸುಳಿದ್ದ. ನಂತರದಲ್ಲಿ ಯೋಗೀಶ್ವರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಸುಮಾರು 4 ಲಕ್ಷ ರೂ. ಹಣವಿದ್ದ ಬ್ಯಾಗ್ ಸುಲಿಗೆ ಮಾಡಿದ್ದ.
ಆರೋಪಿ ಸುಲಿಗೆ ಮಾಡಿ ಹೋಗುವ ಮುನ್ನ, ತಾನು ಬ್ಲಾೃಕ್ ಗ್ಯಾಂಗ್ಗೆ ಸೇರಿದ್ದು, ದೊಡ್ಡವರು ಹೇಳಿದಂತೆ ಈ ಕೆಲಸ ಮಾಡಿದ್ದೇನೆ ಎಂಬುದಾಗಿ ಯೋಗೀಶ್ವರಿ ಅವರಿಗೆ ಹೇಳಿಕೆ ನೀಡಿ ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿದ್ದ ಎಂಬುದು ತನಿಖೆಯಿಂದ ದೃಢವಾಗಿದೆ.
ಆರೋಪಿಯು ತನ್ನ ಸಹೋದರಿ ಚಿಕಿತ್ಸೆಗಾಗಿ ಹಣ ಬೇಕಿದ್ದರಿಂದ ಈನ ಕೆಲಸ ಮಾಡಿದ್ದೇನೆ ಎಂದು ಆರಂಭದಲ್ಲಿ ನಾಟಕ ಮಾಡಿದ್ದ. ಸುಲಿಗೆ ಮಾಡಿದ್ದ ಹಣದಲ್ಲೇ 2-3 ಜೊತೆ ಬಟ್ಟೆ ಕೊಂಡುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಪಿಐ ಪ್ರಭಾವತಿ ಸಿ. ಶೇತಸನದಿ, ಪಿಎಸ್ಐಗಳಾದ ಎಂ. ವಿಜಯ್, ಜಿ.ಎಂ. ರೇಣುಕಾ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.