ಮೈಸೂರು: ಮೈಸೂರಿನಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ 9 ವಿವಿಧ ಜಾತಿಯ ಹಾವು, ಪ್ರಾಣಿಗಳನ್ನು ಸಾಕಣೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಶದಲ್ಲಿದ್ದ ಸರಿಸೃಪಗಳು, ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ.
ಸಿಐಡಿ ಇಲಾಖೆಯ ಅರಣ್ಯ ವಿಭಾಗದ ಅಧಿಕಾರಿಗಳು ಸಂದೀಪ್ ಅಲಿಯಾಸ್ ದೀಪು ಎಂಬಾತನ ಮನೆ ಮೇಲೆ ದಾಳಿ ಮಾಡಿ 16ಕ್ಕೂ ಅಧಿಕ ವಿಷಕಾರಿ ಹಾಗೂ ವಿಷಕಾರಿಯಲ್ಲದ ಒಂಭತ್ತು ಜಾತಿಯ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಸಂದೀಪನನ್ನು ವಶಕ್ಕೆ ಪಡೆದ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಇನ್ನು ಮನೆಯಲ್ಲಿದ್ದ ಹಾವುಗಳನ್ನು ಪರಿಶೀಲನೆ ಮಾಡಿದಾಗ 4 ನಾಗರಹಾವು, 2 ತೋಳದ ಹಾವು, 2 ಕಟ್ಟುಹಾವು, 1 ಕುಕ್ರಿ ಹಾವು, 2 ಮಂಡಲದ ಹಾವು, 2 ಕೆರೆ ಹಾವು, 1 ಕಿಲ್ಬಾಕ್ ಹಾವು ಹಾಗೂ 3 ಮಣ್ಣುಮುಕ್ಕ ಹಾವು ಎಂಬುದು ತಿಳಿದುಬಂದಿದೆ. ಅಲ್ಲದೆ ಪುನುಗು ಬೆಕ್ಕನ್ನು ಕೂಡ ಅಕ್ರಮವಾಗಿ ಸಾಕಿದ್ದ ವಿಷಯ ಬೆಳಕಿಗೆ ಬಂದಿದೆ. ಬಂಧಿತನ ಮನೆಯಲ್ಲಿ ಹಾವುಗಳ ವಿಷವನ್ನು ತೆಗೆಯುವ ಘಟಕ ನಿರ್ಮಾಣ ಮಾಡಿಕೊಂಡಿರುವುದು ಕೂಡ ಗೊತ್ತಾಗಿದೆ. ಹಾವಿನ ವಿಷ ತೆಗೆಯುವ ಘಟಕವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.