ದೆಹಲಿ: ತೆಲಂಗಾಣ ಸೇರಿದಂತೆ ಭಾರತದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 9ರ ಸೋಮವಾರ ಮಧ್ಯಾಹ್ನ 12ಕ್ಕೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ.
ಮಿಜೋರಾಂ ರಾಜ್ಯದಲ್ಲಿ ನವೆಂಬರ್ 7, ಛತ್ತೀಸಗಡ ರಾಜ್ಯದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17ರ ಎರಡು ಹಂತ, ಮಧ್ಯಪ್ರದೇಶದಲ್ಲಿ ನವೆಂಬರ್ 17, ರಾಜಸ್ತಾನದಲ್ಲಿ ನವೆಂಬರ್ 23, ತೆಲಂಗಾಣ ರಾಜ್ಯದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.
ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
ಇದರಿಂದ ಸೋಮವಾರದಿಂದಲೇ ನೀತಿ ಸಂಹಿತೆ ಐದು ರಾಜ್ಯಗಳಲ್ಲಿ ಜಾರಿಗೆ ಬರಲಿದ್ದು, ಸರ್ಕಾರಿ ಘೋಷಣೆಗಳಿಗೆ ಬ್ರೇಕ್ ಬೀಳಲಿದೆ.
ತೆಲಂಗಾಣ ವಿಧಾನಸಭೆಯ 119, ರಾಜಸ್ತಾನದ 200, ಮಧ್ಯಪ್ರದೇಶದ 230, ಛತ್ತೀಸಗಡ ರಾಜ್ಯದ 90 ಹಾಗೂ ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.