ಬೆಂಗಳೂರು ಗ್ರಾಮಾಂತರ: ಬೇರೆ ಜಾತಿಯ ಯುವಕನನ್ನು ಪ್ರೀತಿ ಮಾಡಿದಳೆಂಬ ಕಾರಣಕ್ಕೆ ತನ್ನ ಮಗಳನ್ನೇ ಅಪ್ಪನೊಬ್ಬ ಕತ್ತು ಕೊಯ್ದು ಕೊಲೆ ಮಾಡಿರುವ ಆತಂಕಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರಿನಲ್ಲಿ ನಡೆದಿದೆ. ಕವನಾ ಎಂಬ ಇಪ್ಪತ್ತು ವರ್ಷದ ಯುವತಿಯನ್ನು ಆಕೆಯ ತಂದೆಯಾದ ಮಂಜುನಾಥ್ ಕೊಲೆ ಮಾಡಿ ನಂತರ ಪೋಲಿಸರಿಗೆ ಶರಣಾಗಿದ್ದಾನೆ.
ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಆಕ್ರೋಶಗೊಂಡು ಮಂಜುನಾಥ್ ಕೊಲೆ ಮಾಡಿದ್ದೀನಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ವಿಶ್ವನಾಥಪುರ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಅಷ್ಟಕ್ಕೂ ಕವನ ಅದೇ ಗ್ರಾಮದ ಬೇರೆ ಜಾತಿಯ ಯುವಕನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಳು.
ಈ ವಿಷಯ ಆಕೆಯ ಅಪ್ಪನಿಗೆ ತಿಳಿದ ನಂತರ ಮನೆಯಲ್ಲಿ ಈ ವಿಚಾರವಾಗಿ ರಾದ್ಧಾಂತ ಸೃಷ್ಟಿಯಾಗಿತ್ತು. ಈ ಕುರಿತು ತಂದೆ ತನ್ನ ಮಗಳಿಗೆ ಎರಡು ಮೂರು ಬಾರಿ ಬುದ್ದಿ ಹೇಳಿದ್ದ. ಆದರೆ ತಂದೆಯ ಮಾತು ಕೇಳದ ಮಗಳು ಆತನನ್ನು ಪ್ರೀತಿಸುವುದನ್ನು ಮುಂದುವರಿಸಿದ್ದಳು. ಇದರಿಂದ ಕುಪಿತಗೊಂಡ ಮಂಜುನಾಥ್ ಊರಲ್ಲಿ ತನ್ನ ಮರ್ಯಾದೆ ಹೋಗುತ್ತದೆ ಎಂದು ತನ್ನ ಮಗಳನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಮಂಜುನಾಥ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಕಳೆದ ಮಂಗಳವಾರವಷ್ಟೇ ಕಿರಿಯ ಮಗಳು ಬೇರೊಬ್ಬ ಯುವಕನನ್ನು ಪ್ರೀತಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಅವಳು ಅಪ್ರಾಪ್ತ ವಯಸ್ಸಿನ ಹುಡುಗಿ ಆಗಿದ್ರಿಂದ ಆಕೆಯನ್ನು ಪೊಲೀಸರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇದರ ಬೆನ್ನಲ್ಲೇ ಕೊಲೆಯಾದ ಮಗಳು ಕೂಡ ಅನ್ಯ ಜಾತಿಯ ಯುವಕನನ್ನು ಪ್ರೀತಿಸುವ ವಿಚಾರ ಮಂಜುನಾಥ್ಗೆ ತಿಳಿದಿದೆ.
ಹೀಗಾಗಿ ಚಿಕ್ಕ ಮಗಳು ನನ್ನ ಮರ್ಯಾದೆ ಕಳೆದ್ಲು, ಇವಳು ಕೂಡ ಮರ್ಯಾದೆ ಕಳೆಯುತ್ತಾಳೆ ಅಂತ ಭಯದಿಂದ ಹಿರಿ ಮಗಳನ್ನು ಕೊಲೆ ಮಾಡಿದ್ದಾನೆ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ತಂದೆ ಮಂಜುನಾಥ್ ಕೋಳಿ ಕೊಯ್ಯುವ ಚಾಕುವಿನಿಂದ ಮಗಳ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರತಿ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವ ತಂದೆಯೇ ಇಂತಹ ತಪ್ಪು ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.