ಚಿತ್ರದುರ್ಗ : ಟಿವಿ ರಿಮೋಟ್ ವಿಚಾರಕ್ಕಾಗಿ ಅಣ್ಣ ತಮ್ಮಂದಿರಿಬ್ಬರ ಮಧ್ಯದಲ್ಲಿ ನಡೆದ ಗಲಾಟೆಯಲ್ಲಿ ತನ್ನ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಮೊಳಕಾಲ್ಮುರು ಪಟ್ಟಣದ ಎನ್.ಎಂ. ಎಸ್. ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೊಳಕಾಲ್ಮುರು ಪಟ್ಟಣದ ಎನ್. ಎಂ.ಎಸ್. ಬಡಾವಣೆ ನಿವಾಸಿಯಾದ ಲಕ್ಷ್ಮಣ ಬಾಬು ಎಂಬುವವರು ತನ್ನ ಸ್ವಂತ ಮಗನನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದು ತನ್ನ ಮೊದಲ ಮಗನಾದ 16 ವರ್ಷದ ಚಂದ್ರಶೇಖರ್ ಮತ್ತು ಎರಡನೆಯ ಮಗನಾದ ಓದುತ್ತಿದ್ದ 14 ವರ್ಷದ ಪವನ್ ಕುಮಾರ್ ಈ ಇಬ್ಬರು ಟಿವಿ ರಿಮೋಟ್ ಗಾಗಿ ಕಳೆದ ರಾತ್ರಿ 8 ಗಂಟೆ ಸಮಯದಲ್ಲಿ ಜಗಳವಾಡುತ್ತಿದ್ದರು. ಆಗ ಇವರ ತಂದೆ ಲಕ್ಷ್ಮಣಬಾಬು ಕಚ್ಚಾಡಬೇಡಿ ಎಂದು ಬೈದರು ಮಕ್ಕಳು ಮಾತು ಕೇಳಲಿಲ್ಲ. ಸಿಟ್ಟಿಗೆದ್ದ ತಂದೆಯು ಪಕ್ಕದಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡು ಚಂದ್ರಶೇಖರ್ ಕಡೆಗೆ ಬೀಸಿದ್ದಾನೆ,ಕತ್ತರಿಯೂ ಮೊದಲನೇ ಮಗ ಚಂದ್ರಶೇಖರನ ಕುತ್ತಿಗೆಯ ಬಲಭಾಗಕ್ಕೆ ಬಿದ್ದ ಕಾರಣ ತೀವ್ರ ರಕ್ತ ಸ್ರಾವವಾಗಿದೆ,ಇದನ್ನು ನೋಡಿದ ಕೂಡಲೇ ಈತನ ತಾಯಿ ಲಕ್ಷ್ಮಿ ಅಡುಗೆ ಮನೆಯಿಂದ ಕಿರುಚುತ್ತ ಹೊರಬಂದು ತನ್ನ ಮಗನನ್ನು ಮೊಳಕಾಲ್ಮುರು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ರಾಂಪುರ ಸಮೀಪದಲ್ಲಿ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗನನ್ನೇ ಕೊಲೆಗೈದಿರುವ ಆರೋಪಿ ರೂಪ ಲಕ್ಷ್ಮಣ ಬಾಬು ವಿರುದ್ಧ ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ ಬಿ.ರಾಜಣ್ಣ ಮೊಳಕಾಲ್ಮೂರು ಪಿಎಸ್ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.