ಉಡುಪಿ : ಕಾಪು ನಲ್ಲಿ ತನ್ನ ಬಗ್ಗೆ ಊರಿನಲ್ಲಿ ಅಪಪ್ರಚಾರ ನಡೆಸುತ್ತಿದ್ದಾನೆಂಬ ಶಂಕೆಯ ಮೇಲೆ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.
ಮಲ್ಲಾರು ಅಚ್ಚಾಲು ನಿವಾಸಿ ಅಬ್ದುಲ್ ಹಕೀಂ (42) ಅವರಿಗೆ ಚೂರಿಯಿಂದ ಇರಿದು, ಕಲ್ಲಿನ ಹೊಡೆದು ಗಾಯಗೊಳಿಸಿದ ಮಹಮ್ಮದ್ ಫೈಜಲ್ ಮತ್ತು ರಶ್ವಿàದ್ ಬಂಧಿತ ಆರೋಪಿಗಳು.
ಘಟನೆಯ ವಿವರ ಇಂತಿದೆ…
ರವಿವಾರ ರಾತ್ರಿ ತನ್ನ ಮನೆ ಸಮೀಪದ ಮಲ್ಲಾರು ಅಚ್ಚಾಲ್ ರೈಲ್ವೇ ಬ್ರಿಡ್ಜ್ ಕೆಳಗಡೆ ಕುಳಿತುಕೊಂಡಿದ್ದ ಅಬ್ದುಲ್ ಹಕೀಂ ಅವರಿಗೆ ಅವರ ಹಿಂಬದಿಯಿಂದ ಬಂದಿದ್ದ ಪರಿಚಿತರಾದ ಮಹಮ್ಮದ್ ಫೈಜಲ್ ಚೂರಿಯಿಂದ ಸೊಂಟ ಮತ್ತು ಬಲಗೈಗೆ ಚುಚ್ಚಿದ್ದು, ಆತನೊಂದಿಗಿದ್ದ ರಶ್ವಿದ್ ರೈಲ್ವೇ ಟ್ರಾಕ್ನಲ್ಲಿದ್ದ ಕಲ್ಲುಗಳನ್ನು ತೆಗೆದುಕೊಂಡು ತಲೆಗೆ ಹಲ್ಲೆ ನಡೆಸಿದ್ದ.
ಮನೆ ಸಮೀಪವೇ ನಡೆದ ಘಟನೆಯನ್ನು ಕಂಡು ಹಕೀಂ ಅವರ ಮಗ ಮತ್ತು ಇತರರು ಸ್ಥಳಕ್ಕೆ ಓಡಿ ಬಂದಿದ್ದು ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಕೂಡಲೇ ಸ್ಥಳೀಯರು ಜತೆ ಸೇರಿ ಗಾಯಾಳುವನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿನ ವೈದ್ಯರ ಶಿಫಾರಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಪು ಪೊಲೀಸರು ಎಸ್ಸೈ ಅಬ್ದುಲ್ ಖಾದರ್ ಮತ್ತು ಕ್ರೈಂ ಎಸ್ಸೈ ಪುರುಷೋತ್ತಮ್ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ್ದರು. ಸೋಮವಾರ ಸಂಜೆ ಮಲ್ಲಾರು ಪಕೀರಣಕಟ್ಟೆಯ ಬಳಿ ಆರೋಪಿಗಳಾದ ಫೈಜಲ್ ಮತ್ತು ರಶ್ವಿದ್ನನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ.