ಬೆಳಗಾವಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು 13 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಅರ್ಜುನ ಗಂಡವ್ವಗೋಳ, ಲಕ್ಷ್ಮಿ ಮಸ್ಕಿ, ಶೋಭಾ ಮಾಳಗಿ, ಮಾರ್ಕಂಡೇಶ್ವರ ಮಹಿಮಗೋಳ, ರಾಘವೇಂದ್ರ ಚಿಂಚಲಿ, ಸರಸ್ವತಿ ಕೋಳಿ, ಸಾವಿತ್ರಿ ಪೂಜೇರಿ, ಕಮಲವ್ವ ಭಜಂತ್ರಿ, ಮಾರುತಿ ದೊಡಮನಿ, ಉದಯ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ಸುಧೀರ ಜೋಡಟ್ಟಿ, ಶಾಲವ್ವ ದೊಡಮನಿ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ರಾತ್ರಿ 9ರ ಸುಮಾರಿಗೆ ಇಲ್ಲಿನ ಮೃತ್ಯುಂಜಯ ಸರ್ಕಲ್ನಲ್ಲಿ ಸೇರಿದ ಕೆಲವು ಮಹಿಳೆಯರು ಹಾಗೂ ಪುರುಷರ ಗುಂಪು ಹಣದ ವಿಚಾರವಾಗಿ, ಶ್ರೀದೇವಿ ಎಂಬ ಮಹಿಳೆಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.
ಆ ಬಳಿಕ ಚಪ್ಪಲಿ, ಬೂಟುಗಳನ್ನು ಕಟ್ಟಿ ಹಾರ ಮಾಡಿ ಕೊರಳಿಗೆ ಹಾಕಿ ರಸ್ತೆ ಮಧ್ಯೆ ಮೆರವಣಿಗೆ ಮಾಡಿದ್ದರು. ಈ ಅಮಾನವೀಯ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಡಿ ಘಟಪ್ರಭಾ ಮಹಿಳಾ ಠಾಣೆಯಲ್ಲಿ 13ಕ್ಕೂ ಹೆಚ್ಚು ಮಂದಿ ವಿರುದ್ಧ ದೂರು ದಾಖಲಾಗಿದೆ.