ಕಲಬುರಗಿ: ಜಿಲ್ಲೆಯಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ. ಹದಗೆಡಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೇ ನೇರ ಕಾರಣ. ಅವರಿಗೆ ಸೆನ್ಸ್ ಇಲ್ಲ, ಆ ಮನುಷ್ಯ ನಾನ್ಸೇನ್ಸ್ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಟೀಕಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ದಿನಗಳಿಂದ ಕೂಲಿ ಸಮಾಜ ಬಾಂಧವರು ಪ್ರತಿಭಟನೆ ಮಾಡುತ್ತಿದ್ದಾರೆ.
ಸೌಜನ್ಯಕ್ಕಾದರು ಸಚಿವರು (ಪ್ರಿಯಾಂಕ್ ಖರ್ಗೆ) ಕೂಲಿ ಸಮಾಜ ಹೋರಾಟಗಾರರನ್ನು ಭೇಟಿ ಮಾಡಿಲ್ಲ. ಕೂಲಿ ಸಮಾಜದ ದೇವಾನಂದ್ ಆತ್ಮಹತ್ಯೆ ಹತ್ಯೆಗೆ ಕಾರಣವಾಗಿರುವ ಆರೋಪಿಗಳು ಸಚಿವರ ಜೊತೆಯಲ್ಲೇ ಇದ್ದಾರೆ ಎಂದು ಆರೋಪಿಸಿದ್ದಾರೆ.
ಚಿತ್ತಾಪುರ ತಾಲೂಕಿನಲ್ಲಿ ಇಓ ವಿರುದ್ಧ ಭ್ರಷ್ಟಾಚಾರ ದೂರು ನೀಡಿದರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ತನಿಖೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಓ ಅವರು ಸಚಿವರ ಸಂಬಂಧಿಕರು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆಂದೋಲ ಶ್ರೀಗಳ ಮಠದಲ್ಲಿ ದಲಿತ ಬಾಂಧವರೆ ಧ್ವಜಾರೋಹಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಲಿತ ನಾಯಕರು ಕಲಬುರಗಿ ನಗರದ ಎಸ್ಪಿ ಕಚೇರಿ ಪಕ್ಕದಲ್ಲಿ ಜಮೀನಿನಲ್ಲಿ ಪೀಪಲ್ಸ್ ಎಜುಕೇಶನ್ ಸೊಸೈಟಿ ಮಾಡಿ ಕಚೇರಿ ಮಾಡಿದ್ದಾರೆ. ನಿಜವಾದ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಭಿಮಾನಿಗಳಾದರೆ ‘ಪೀಪಲ್ಸ್ ಎಜುಕೇಷನ್ ಸೋಸೈಟಿ’ ಕಚೇರಿ ಮುಂದೆ ಧ್ವಜಾರೋಹಣ ಮಾಡಿ. ನಾವು ಕೂಡ ಸಾಥ್ ನೀಡುತ್ತೇವೆ. ಕಾನೂನು ಬಾಹಿರವಾಗಿ ಮಠದ ಜಾಗದಲ್ಲಿ ಧ್ವಜಾರೋಹಣ ಮಾಡೋದು ಅಥವಾ ಇನ್ನಿತರ ಚಟುವಟಿಕೆ ಮಾಡೋದು ಸರಿ ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.