ಅಸ್ಸಾಂ: ಆಸ್ಸಾಮಿನ ದಿಬ್ರುಗಢ ಮೂಲದ ಕಿಶನ್ ಬಗಾರಿಯಾ ಸೃಷ್ಟಿಸಿದ Texts.com ಎಂಬ ಮೆಸೇಜಿಂಗ್ ಆಯಪ್ ಅಮೆರಿಕದ ಆಟೋಮ್ಯಾಟಿಕ್ ಕಂಪನಿ 50 ಮಿಲಿಯನ್ ಡಾಲರ್ಗೆ ಖರೀದಿ ಮಾಡಿದೆ.
ಅಸ್ಸೋಂ ಯುವಕನೊಬ್ಬ ರಾತ್ರೋರಾತ್ರಿ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾನೆ. ಈ ಯುವಕ ರಚನೆ ಮಾಡಿರುವ ಮೆಸೇಜಿಂಗ್ ಆಯಪ್ಅನ್ನು ಅಮೆರಿಕದ ಕಂಪನಿಯೊಂದು ಬರೋಬ್ಬರಿ 50 ಮಿಲಿಯನ್ ಡಾಲರ್ಗೆ ಖರೀದಿಸಿದೆ. ಭಾರತೀಯ ರೂಪಾಯಿಗೆ ಹೋಲಿಕೆ ಮಾಡಿದರೆ, ಇದರ ಮೌಲ್ಯ ಸರಿಸುಮಾರು 416 ಕೋಟಿ ಆಗಲಿದೆ!.
ಅಸ್ಸೋಂನ ದಿಬ್ರುಗಢ ಮೂಲದ ಕಿಶನ್ ಬಗಾರಿಯಾ ಎಂಬ ಯುವಕನೇ ತನ್ನ ಮೆಸೇಜಿಂಗ್ ಆಯಪ್ ಮೂಲಕ ದೇಶ ಮಾತ್ರವಲ್ಲದೇ ಜಗತ್ತಿನ ಗಮನ ಸೆಳೆದಿದ್ದಾನೆ. ಕಿಶನ್ ಬಗಾರಿಯಾ Texts.com ಎಂಬ ಮೆಸೇಜಿಂಗ್ ಆಯಪ್ ಸೃಷ್ಟಿ ಮಾಡಿದ್ದಾನೆ. ಇದು ವಿವಿಧ ಸಾಮಾಜಿಕ ಮಾಧ್ಯಮ ಆಯಪ್ಗಳ ಮೆಸೇಜ್ಗಳನ್ನು ಒಂದೇ ಪ್ಲಾಟ್ಫಾರ್ಮ್ ಮೂಲಕ ರವಾನಿಸುವ ಅಪ್ಲಿಕೇಶನ್ ಆಗಿದೆ. ಅಮೆರಿಕದ ಟೆಕ್ ದೈತ್ಯ ಆಟೋಮ್ಯಾಟಿಕ್ (automattic) ಕಂಪನಿ ಖರೀದಿ ಮಾಡಿದೆ.
ಮ್ಯಾಟ್ ಮುಲ್ಲೆನ್ವೆಗ್ ಸ್ಥಾಪಿಸಿದ ಆಟೋಮ್ಯಾಟಿಕ್ ಕಂಪನಿಯು wordpress.com ಮತ್ತು Tumblr ಎಂಬ ಜನಪ್ರಿಯ ಸಾಮಾಜಿಕ ಜಾಲತಾಣಗಳನ್ನು ಹೊಂದಿದೆ. ಇದೀಗ ಕಿಶನ್ ಸೃಷ್ಟಿಸಿದ Texts.com ಜೊತೆಗೆ 50 ಮಿಲಿಯನ್ ಯುಎಸ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೇ, ಆಯಪ್ ಅನ್ನು ಖರೀದಿಸಿರುವುದು ಮಾತ್ರವಲ್ಲದೇ, Texts.comನ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕಿಶನ್ ಅವರಿಗೆ ಕಂಪನಿಯು ಕೇಳಿಕೊಂಡಿದೆ.
ಕಿಸಾನ್ ರಚಿಸಿದ ಈ Text.com ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್, ಟ್ವಿಟ್ಟರ್ (ಈಗ ಎಕ್ಸ್), ಮೆಸೇಂಜರ್, ವಾಟ್ಸ್ಆಯಪ್ ಹಾಗೂ ಇತ್ಯಾದಿ ಆಯಪ್ಗಳನ್ನು ಅದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ದಿಬ್ರುಗಢದ ಉದ್ಯಮಿ ಮಹೇಂದ್ರ ಬಗಾರಿಯಾ ಮತ್ತು ನಮೀತಾ ಬಗಾರಿಯಾ ಪುತ್ರರಾದ ಕಿಶನ್, ಒಂಬತ್ತು ತಿಂಗಳ ನಂತರ ಅಮೆರಿಕದಿಂದ ಬುಧವಾರ ತವರಿಗೆ ಆಗಮಿಸಿದ್ದಾರೆ. ದಿಬ್ರುಗಢ ಮೋಹನ್ಬರಿ ವಿಮಾನ ನಿಲ್ದಾಣದಲ್ಲಿ ಕಿಶನ್ ಅವರನ್ನು ಅವರ ಕುಟುಂಬ ಮತ್ತು ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ, ಮಾತನಾಡಿದ ಕಿಶನ್, ಕಠಿಣ ಪರಿಶ್ರಮ ಮತ್ತು ನಿರಂತರ ಅನ್ವೇಷಣೆಯ ಜೊತೆಗೆ ದೇವರು ಮತ್ತು ಅವರ ಹೆತ್ತವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು. ಕಿಶನ್ ಅವರ ತಂದೆ ಮಹೇಂದ್ರ ಪ್ರತಿಕ್ರಿಯಿಸಿ, ನಮ್ಮ ಮಗ ತನ್ನ ಬಾಲ್ಯದಿಂದಲೂ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈಗ ಅಂತಹ ಚಿಕ್ಕ ವಯಸ್ಸಿನಲ್ಲೇ ನಮ್ಮ ಕುಟುಂಬ ಮತ್ತು ರಾಜ್ಯವನ್ನೇ ಹೆಮ್ಮೆಪಡುವಂತೆ ಮಾಡಿದ್ದಾನೆ. ದುರ್ಗಾ ಪೂಜೆಯ ವೇಳೆ ಶುಭ ಸುದ್ದಿ ಸಿಕ್ಕಿದೆ ಎಂದು ತಿಳಿಸಿದರು.