ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ, ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಕರ್ನಾಟಕ ವಿಧಾನಸಭೆ ನಡೆದ 6 ತಿಂಗಳ ಬಳಿಕ ಬಿಜೆಪಿ ಕೊನೆಗೂ ವಿಪಕ್ಷ ನಾಯಕನ ಹೆಸರು ಘೋಷಣೆ ಮಾಡಿದೆ. ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ದಿನದಲ್ಲೇ ಬಿಜೆಪಿ ವಿಪಕ್ಷ ನಾಯಕನ ಹೆಸರನ್ನೂ ಘೋಷಣೆ ಮಾಡಿದೆ.
ಆರ್. ಅಶೋಕ್ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕರಾಗಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನಾಗಿರು ಅಶೋಕ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದಾರೆ.
ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಮಾತನಾಡಿದ ಆರ್. ಅಶೋಕ, ” ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಪಕ್ಷ ಬಲಪಡಿಸಲು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ.” ಎಂದು ಹೇಳಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಹೆಚ್ಚಾಗುವ ಸಾಧ್ಯತೆ ಇದೆ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಹಲವು ನಾಯಕರು ಅಸಮಧಾನಗೊಂಡಿದ್ದು, ಈ ನಾಯಕರನ್ನು ಹೇಗೆ ಸಮಾಧಾನ ಪಡಿಸುತ್ತಾರೆ ನೋಡಬೇಕಿದೆ.