ಉಡುಪಿ : ಕುಂದಾಪುರ ಮಹಿಳೆಯೊಬ್ಬರಿಂದ ತನ್ನ ಉದ್ಯಮಕ್ಕೆಂದು ಒಟ್ಟು 10 ಲಕ್ಷ ರೂ.ಹಣ ಪಡೆದ ವ್ಯಕ್ತಿಯೊಬ್ಬ ಮೂರು ವರ್ಷ ಕಳೆದರೂ ಹಣ ಹಿಂದಿರುಗಿಸದೇ, ಕೇಳಿದಾಗ ಜೀವಬೆದರಿಕೆ ಒಡ್ಡಿದ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ಮಹಿಳೆ ಬೇಬಿ ಮೊಗವೀರ ಆಗಿದ್ದು ಪ್ರಕಾಶ್ ಎಚ್ ಎಂಬಾತ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ. 3-4ವರ್ಷಗಳ ಹಿಂದೆ ಪರಿಚಯವಾದ ಪ್ರಕಾಶ್ ತಾನು ಕ್ಯಾಟರಿಂಗ್ ವ್ಯವಹಾರ ನಡೆಸುತಿದ್ದು ಹೊಸ ಉದ್ಯಮ ಪ್ರಾರಂಭಿಸಲು ತುರ್ತು ಹಣದ ಅಗತ್ಯವಿದೆ ಎಂದು ಬೇಬಿ ಮೊಗವೀರ ಅವರನ್ನು ನಂಬಿಸಿ 2020-21ರ ನಡುವೆ ಒಟ್ಟು 10 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದನು. ತನಗೆ ಲೋನ್ ಸಿಕ್ಕ ನಂತರ ಹಣ ಹಿಂದಿರುಗಿಸುವುದಾಗಿ ಆಕೆಗೆ ಭರವಸೆ ನೀಡಿದ್ದ ಇದಕ್ಕಾಗಿ ಬೇಬಿ ಮೊಗವೀರ ಅವರು ತನ್ನ ಚಿನ್ನವನ್ನು ಕುಂದಾಪುರದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟು ಒಟ್ಟು ಐದು ಕಂತುಗಳಲ್ಲಿ ಒಟ್ಟು 10 ಲಕ್ಷ ರೂ.ಗಳನ್ನು ಆರೋಪಿಗೆ ನೀಡಿದ್ದರು. 3 ವರ್ಷವಾದರೂ ಸಾಲ ಕಟ್ಟದಿದ್ದಾಗ ಚಿನ್ನವನ್ನು ಬ್ಯಾಂಕಿನವರು ಮುಟ್ಟುಗೋಲು ಹಾಕಿಕೊಂಡಿದ್ದರು. ತನ್ನ ಹಣ ಹಿಂದಿರುಗಿಸುವಂತೆ ಪದೇ ಪದೇ ಕೇಳಿದರೂ ಸುಳ್ಳು ಹೇಳುತಿದ್ದ ಪ್ರಕಾಶ್ ಕೊನೆಗೆ ನಾನು ಹಣ ಕೊಡುವುದಿಲ್ಲ ನಿನ್ನನ್ನು ಹಾಗೂ ಮಗನಿಗೆ ಗತಿ ಕಾಣಿಸುವುದಾಗಿ ಬೆದರಿಕೆ ಒಡ್ಡಿದ ಎಂದು ಬೇಬಿ ಮೊಗವೀರ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತಿದ್ದಾರೆ.