ಬೀದರ್: ಭಾಲ್ಕಿ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವ ಆರೋಪದಡಿ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಳೇ ಪಟ್ಟಣದ ಅಶೋಕ ನಗರ ಸಮೀಪ ಶನಿವಾರ ಆರೋಪಿ ತಾಜೋದ್ದಿನ್ ಮೆಹಬೂಬ್ ಸಾಬ್ ಶೇಖ್ ಎಂಬುವವರು ದಕ್ಷಿಣ ಆಫ್ರಿಕಾ-ಶ್ರೀಲಂಕಾ ತಂಡಗಳ ಮಧ್ಯೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರು ₹500, ₹1000 ರೂಪಾಯಿಗೆ ಕ್ರಮವಾಗಿ ₹1000, ₹2000 ರೂಪಾಯಿ ನೀಡುವುದಾಗಿ ಕೂಗಿ, ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಅಮರೇಶ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯಿಂದ ₹10 ಸಾವಿರ ರೂಪಾಯಿ ನಗದು, ವಿವೋ ಮೊಬೈಲ್ ಜಪ್ತಿ ಮಾಡಿದೆ.
ಬೆಟ್ಟಿಂಗ್ ರೂಪದಲ್ಲಿ ಸಂಗ್ರಹಿಸಿದ ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಶಿವಕುಮಾರ ಬಾಲಕೃಷ್ಣ ಜೋಷಿಯ ಮೊಬೈಲ್ ಸಂಖ್ಯೆ 9611180701ಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡುತ್ತೇನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಾಗಾಗಿ, ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ದಾಳಿ ಮಾಡಿದ ತಂಡದಲ್ಲಿ ಪೊಲೀಸ್ ಪೇದೆಗಳಾದ ಉಮಾಕಾಂತ, ಸಂಜೀವಕುಮಾರ, ಲಕ್ಷ್ಮಿಪುತ್ರ ಇದ್ದರು.