ಬೆಳಗಾವಿ: ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ವಿಷಕಾರಿ ವಸ್ತು ಬಳಸಿ ಮದ್ದು ಬರುವ ಚಾಕಲೇಟ್ ನೀಡಿ ನಂತರ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಗೋವಾದ ಆರ್ ಪಿ ಎಫ್ ಪೊಲೀಸರು ಬಂಧಿಸಿದ್ದಾರೆ.
ದಿನನಿತ್ಯ ಗೋವಾ -ಬೆಳಗಾವಿ ಮಾರ್ಗವಾಗಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಪ್ರಯಾಣಿಕರ ಜೊತೆಗೆ ಸಲುಗೆ ಬೆಳಸಿಕೊಂಡು ದರೋಡೆ ಮಾಡ್ತಿದ್ದ ಗ್ಯಾಂಗ್ ಗೋವಾ ಮತ್ತು ಕರ್ನಾಟಕ ರೈಲ್ವೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದರು.
ಆದರೆ ಗೋವಾ ಪೊಲೀಸರ ಚಾಣಾಕ್ಷತನದಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ೨೦ ದಿನಗಳ ಹಿಂದೆ ಗೋವಾ-ಬೆಳಗಾವಿ ಮಾರ್ಗದಲ್ಲಿ ಮಧ್ಯಪ್ರದೇಶ ಮೂಲದ ಎಂಟು ಜನ ಪ್ರಯಾಣಿಕರಿಗೆ ತಮ್ಮ ಕೈ ಚಳಕ ತೋರಿ ಮದ್ದು ಬರುವ ಚಾಕಲೇಟ್ ನೀಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು. ಬಳಿಕ ಅಸ್ವಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ೮ ಜನರು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಮ್ಮೂರಿಗೆ ಮರಳಿದ್ದರು. ಈ ಸಂಬಂಧ ಗೋವಾ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋವಾ ಆರ್ಪಿಎಫ್ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ಸರ್ತಾಜ್(೨೯), ಚಂದನ್ ಕುಮಾರ್(೨೩), ದಾರಾಕುಮಾರ್ (೨೯) ಬಂಧಿತ ಆರೋಪಿಗಳು. ಬಂಧಿತರಿAದ ಚಾಕೊಲೇಟ್ ನಲ್ಲಿ ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನ ಪುಡಿ ಮಾಡಿ ಸೇರಿಸಿ ರೇಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನೀಡುತ್ತಿದ್ದರು. ಅದೇ ಮಾದರಿಯ ಮದ್ದಿಲ್ಲದ, ಮದ್ದು ಬಾರದ ಅಸಲಿ ಚಾಕೊಲೇಟ್ ತಾವು ತಿನ್ನುತ್ತಿದ್ದರು. ಮದ್ದು ಬರುವ ಚಾಕೊಲೇಟ್ ತಿನ್ನುತ್ತಿದ್ದಂತೆ ಪ್ರಯಾಣಿಕರು ಮೂರ್ಛೆ ಹೋಗ್ತಿದ್ದರು. ಆಗ ತಕ್ಷಣ ಈ ಗ್ಯಾಂಗ್ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನ ದೋಚಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು. ರೈಲಿನಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಪ್ರಯಾಣಿಕರು ಆತಂಕಿತರಾಗಿದ್ದರು.