ಕಲಬುರಗಿ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನೆಂಬ ಕಾರಣಕ್ಕೆ ಮೊಮ್ಮಗನೊಬ್ಬ ಅಜ್ಜನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ತಾಲೂಕಿನ ಜವಳಗಾಬಿ ಗ್ರಾಮದಲ್ಲಿ ಈ ಘಟೆನೆ ನಡೆದಿದೆ. ಮೃತನನ್ನು ಸಿದ್ರಾಮಪ್ಪ ಕಾಮನ್ (75) ಎಂದು ಗುರುತಿಸಲಾಗಿದೆ. ಆರೋಪಿ ಆಕಾಶ್ ಕಾಮನ್ (22). ಭಾನುವಾರ (ನ.27) ಸಿದ್ರಾಮಪ್ಪ ಸಹೋದರಿ ಸಾವನ್ನಪ್ಪಿದ ಹಿನ್ನಲೆ ಕುಟುಂಬ ಮತ್ತು ಸರೋಜಾ ಕುಟುಂಬ ಕಲಬುರಗಿ ತಾಲ್ಲೂಕಿನ ಕುಮಿಸಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕ್ರೂಸರ್ ವಾಹನದಲ್ಲಿ ವಾಪಸ್ ಬರುವಾಗ ಸರೋಜಾ ಅವರು ಸಿದ್ರಾಮಪ್ಪನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದ್ದರು.
ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿಟ್ಟಿಗೆದ್ದ ಸಿದ್ರಾಮಪ್ಪ ಅವಾಚ್ಯ ಶಬ್ದಗಳಿಂದ ಸರೋಜಾ ಅವರನ್ನು ನಿಂದನೆ ಮಾಡಿದ್ದರು. ಈ ವಿಷಯವನ್ನು ಸರೋಜಾ ತನ್ನ ಮಗನಿಗೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಕಾಶ್ ಅಜ್ಜನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಆಕಾಶ್ ನನ್ನು ಬಂಧಿಸಲಾಗಿದೆ.