ಶಿವಮೊಗ್ಗ : ವಿದ್ಯುತ್ ಸ್ಪರ್ಶದಿಂದ ಕರ್ತವ್ಯನಿರತ ಲೈನ್ ಮ್ಯಾನ್ ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಈ ಮೊದಲೇ ಈ ಭಾಗದಲ್ಲಿ ಮೆಂಟೇನೆನ್ಸ್ ಕಾಮಗಾರಿ ಬಗ್ಗೆ ಮೆಸ್ಕಾಂ ಪ್ರಕಟಣೆ ನೀಡಿತ್ತು. ಅದರಂತೆ, ಇಂದು ಬೆಳಗ್ಗೆ 9 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಈ ಮಧ್ಯೆ ಇಂಡಸ್ಟ್ರೀಯಲ್ ಏರಿಯಾದ ಮೊದಲನೇ ತಿರುವಿನ ರಸ್ತೆಯಲ್ಲಿ ಇರುವ ಹೈಟೆನ್ಶನ್ ಕಂಬವನ್ನು ಮೆಸ್ಕಾಂ ಸಿಬ್ಬಂದಿ ಹತ್ತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಕಿರಣ್ ಎಂಬಾತ ಕಂಬದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೂ ಸುನಿಲ್ ಹಾಗೂ ಭಾಸ್ಕರ್ ಎಂಬವರಿಗೆ ಘಟನೆಯಲ್ಲಿ ಗಾಯಗಳಾಗಿವೆ..
ವಿದ್ಯುತ್ ಲೈನ್ ಚೇಂಜ್ ವೇಳೆ ಈ ದುರ್ಘಟನೆ ಸಂಭವಿಸಿತಾ? ಅಥವಾ ಜನರೇಟರ್ಗಳ ವಿದ್ಯುತ್ ರಿವರ್ಸ್ ಆಗಿ ಘಟನೆ ಸಂಭವಿಸಿತಾ? ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸ್ತಿದ್ದಾರೆ. ಇನ್ನೂ ಸಿಬ್ಬಂದಿಯೊಬ್ಬ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿರುವುದು ಲೈನ್ ಮ್ಯಾನ್ಗಳಲ್ಲಿ ಆತಂಕ ಮೂಡಿಸಿದೆ.