ಬೆಂಗಳೂರು: ಏಳು ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದಿದ್ದು, 7 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ವಿನೋದ್ ಮತ್ತು ನಳಿನ ದಂಪತಿಯ ಪುತ್ರಿ ಯಾಗಿದ್ದು, ಹಠ ಮಾಡ್ತಾಳೆ ಬುದ್ದಿ ಹೇಳಿ ಅಂತ ಕೆಳಗಡೆ ಮನೆಗೆ ಕಳುಹಿಸಿಕೊಟ್ಟ ವೇಳೆ ಘಟನೆ ನಡೆದಿದೆ.
ದಂಪತಿಗಳು ಮಗಳಿಗೆ ಬುದ್ಧಿ ಹೇಳಿ ಅಂತ ನಂಜುಂಡಪ್ಪ ಎಂಬುವರ ಮನೆಗೆ ಕಳುಹಿಸಿದ್ದಂತೆ. ನಿನ್ನೆ ರಾತ್ರಿ ಅಲ್ಲಿಯೇ ಊಟ ಮಾಡಿ ಮಲಗಿದ್ದ ಬಾಲಕಿ, ರಾತ್ರಿ 2 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಳಂತೆ. ನಂತರ ಪೋಷಕರಿಗೆ ಕರೆ ಮಾಡಿದ್ದ ನಂಜುಂಡಪ್ಪ, ಪೋಷಕರಿಗೆ ಫೋನ್ ಮಾಡಿದ್ದಾರೆ. ಆದರೆ ಅವರು ಫೋನ್ ಕರೆ ತೆಗೆಯದಿದ್ದಾಗ ಖುದ್ದು ಬಾಲಕಿಯನ್ನ ನಂಜುಂಡಪ್ಪ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಂತೆ. ಈ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಬಾಲಕಿ ತಂದೆ ವಿನೋದ್ ಕೆಳಗಡೆ ಮನೆ ನಿವಾಸಿಗಳ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಎಫ್ಎಸ್ಎಲ್ ಟೀಂ ಜೊತೆಗೆ ಪರಿಶೀಲನೆ ನಡೆಸಿದ್ದಾರೆ. ಮಗುವಿಗೆ ಭಯ ಹುಟ್ಟಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲದೇ ಭಯ ಹುಟ್ಟಿಸಲು ಮಗುವಿಗೆ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯ ಕೈ ಮೇಲೆ ರಕ್ತ ಹೆಪ್ಪುಗಟ್ಟಿದ ಗಾಯಗಳು ಪತ್ತೆಯಾಗಿದೆ ಎನ್ನಲಾಗಿದೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಂಜುಂಡಪ್ಪ ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇನ್ನು, 2016ರಲ್ಲಿ ಆಕೃತಿ ಪೋಷಕರಾದ ವಿನೋದ್- ನಳಿನ ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಆಕೃತಿ, 6 ತಿಂಗಳ ರಕ್ಷಿತಿ ಎಂಬ ಇಬ್ಬರು ಹಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳು ಆಕೃತಿ ತುಂಬ ಹಠದ ಸ್ವಭಾವ, ಉಗುರು ಕಚ್ಚುವುದು, ಬಟ್ಟೆ ಕಚ್ಚುವ ಅಭ್ಯಾಸ ಬೆಳೆಸಿಕೊಂಡಿದ್ದಳಂತೆ. ಇದರಿಂದ ಮಗಳಿಗೆ ಬುದ್ದಿ ಹೇಳಲು ಕೆಳಗಡೆ ಮನೆಗೆ ಪೋಷಕರು ಕಳುಹಿಸಿಕೊಟ್ಟಿದ್ದರಂತೆ. ಈ ಹಿಂದೆ ಕೂಡ ಕೆಳಗಡೆ ಮನೆಗೆ ಬಾಲಕಿ ನಿತ್ಯ ಹೋಗಿ ಬರುತ್ತಿದ್ದಳಂತೆ.