ಚಿತ್ರದುರ್ಗ: ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ, ಬೀದರ್ – ಶ್ರೀರಂಗಪಟ್ಟಣ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ನಂಬರ್ 14ರಲ್ಲಿ) ಕೆಎಸ್ ಆರ್ ಟಿಸಿ ಹಾಗೂ ಲಾರಿಯೊಂದರ ನಡುವೆ ಭೀಕರ ಅಪಘಾತ ಸಂಭವಿಸಿದೆ. ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ.
ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಬರುತಿದ್ದ KSRTC ಬಸ್ ಗೆ ಹಿಂದೆ ಬಂದ ಲಾರಿ ಓವರ್ ಟೇಕ್ ಮಾಡುವಾಗ ಈ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ನ ಮುಂದಿನ ಸೀಟುಗಳಲ್ಲಿ ಕುಳಿತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ. ಅವರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45), ರಾಯಚೂರಿನ ಮಸ್ಕಿ ಮೂಲದ ರಮೇಶ್(40) ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರೆಲ್ಲರನ್ನೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.