ಬೆಂಗಳೂರು: ಆನೇಕಲ್ ನಲ್ಲಿ – ಶ್ರೀಗಂಧ ಕಳ್ಳನನ್ನು ಬಂಧಿಸಲು ಹೋದ ಅರಣ್ಯ ಸಿಬ್ಬಂದಿ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದಾಗ ಫಾರೆಸ್ಟ್ ಗಾರ್ಡ್ ಹಾರಿಸಿದ ಗುಂಡು ಚೋರನಿಗೆ ತಗುಲಿ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಾಲೂರು ತಾಲ್ಲೂಕಿನ ತಿಮ್ಮರಾಯಪ್ಪ (28) ಎಂದು ಗುರುತಿಸಲಾಗಿದೆ.
ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಹಲವು ದಿನಗಳಿಂದ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆ ಬಳಿ ಶ್ರೀಗಂಧ ಮರಗಳು ಕಳ್ಳತನ ನಡೆಯುತ್ತಿತ್ತು. ಹಾಗಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ರಾತ್ರಿ ರೌಂಡ್ಸ್ ನಲ್ಲಿದ್ದರು. ರಾತ್ರಿ 11.45ರ ಸುಮಾರಿನಲ್ಲಿ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಚೋರರು ಬಂದು ಮರ ಕಡಿಯುತ್ತಿದ್ದಾಗ ಬೀಟ್ ಫಾರೆಸ್ಟ್ ಗಾರ್ಡ್ಗಳಿಗೆ ಶಬ್ಧ ಕೇಳಿಸಿದೆ.
ತಕ್ಷಣ ಅಲ್ಲಿಗೆ ಬಂದ ಫಾರೆಸ್ಟ್ ಗಾರ್ಡ್ಗಳು ಸುತ್ತುವರಿದು ಶ್ರೀಗಂಧ ಚೋರರಿಗೆ ಶರಣಾಗುವಂತೆ ಹೇಳಿದಾಗ ಚೋರರು ಮಚ್ಚಿನಿಂದ ಹಲ್ಲೆಗೆ ಮುಂದಾಗುತ್ತಿದಂತೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.
ಆ ವೇಳೆ ಚೋರರು ಸಿಬ್ಬಂದಿ ಮೇಲೆ ಮಚ್ಚಿನಿಂದ ದಾಳಿಗೆ ಮುನ್ನುಗ್ಗಿ ಬಂದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಒಬ್ಬನಿಗೆ ತಗುಲಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ಗಾಬರಿಯದ ಮತ್ತೊಬ್ಬ ಕಳ್ಳ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಗರಗಸ ಹಾಗೂ ಮಚ್ಚುಗಳನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸುದ್ದಿ ತಿಳಿದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದಾಗ, ಶ್ರೀಗಂಧ ಮರ ಕಡಿಯುತ್ತಿದ್ದ ಶಬ್ಧ ಕೇಳಿ ಸಮೀಪ ಹೋಗುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್ ಗಾರ್ಡ್ ಫೈರಿಂಗ್ ಮಾಡಿದ್ದರಿಂದ ಕಳ್ಳ ಸಾವನ್ನಪ್ಪಿದ್ದಾನೆಂದು ತಿಳಿಸಿದರು.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಎಫ್ಎಸ್ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಅರಣ್ಯದಿಂದ ಮುಖ್ಯರಸ್ತೆ ಸಮೀಪವಿರುವುದರಿಂದ ಮತ್ತೊಬ್ಬ ಆರೋಪಿ ಕೌಂಪೌಂಡ್ ಜಿಗಿದು ಪರಾರಿಯಾಗಿದ್ದು ಆತನ ಶೋಧ ಕಾರ್ಯ ಮುಂದುವರೆದಿದೆ.