ಮಂಗಳೂರು: ಮಂಗಳೂರಿನಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಮಂಗಳೂರು ಹೊರವಲಯದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕಳವಾರು ಎಂಬಲ್ಲಿ ಘಟನೆ ನಡೆದಿದೆ.
ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್ (23) ಚೂರಿ ಇರಿತಕ್ಕೆ ಒಳಗಾದ ಯುವಕ. ಸಂಜೆ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ಸಫ್ವಾನ್ ಅವರ ಕೈ ಹಾಗೂ ಬೆನ್ನಿಗೆ ತಂಡ ಚೂರಿಯಿಂದ ಇರಿದಿದೆ.
ಗಾಯಗೊಂಡ ಸಫ್ವಾನ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳೀಯರು ಹಾಗೂ ಪರಿಚಿತರಿಂದಲೇ ಸಫ್ವಾನ್ ಮೇಲೆ ಹಲ್ಲೆಯಾಗಿದೆ ಎನ್ನಲಾಗಿದೆ. ಸುರತ್ಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.