ತಮಿಳುನಾಡು : ಚೆನ್ನೈನಲ್ಲಿ ಮದುವೆಯಾದ ಮೊದಲನೇ ರಾತ್ರಿಯಂದು ಯುವಕನೊಬ್ಬ ಪತ್ನಿಯ ಮದುವೆ ಸೀರೆಗೆ ನೇಣು ಹಾಕಿಕೊಂಡಿರುವ ಆಘಾತಕಾರಿ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ಬುಧವಾರ ನಡೆದಿದೆ.
ಮೃತ ಯುವಕ ಸರವಣನ್ ಎಂದು ಗುರುತಿಸಲಾಗಿದೆ. ಈತ ಓಚೇರಿ ನಿವಾಸಿಯಾಗಿದ್ದು, ಸುಂಗುವಚತಿರಂನಲ್ಲಿರುವ ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಬಾಲ್ಯದಿಂದಲೇ ಸ್ನೇಹಿತೆಯಾಗಿ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು.
ಮದುವೆಯನ್ನು ಎರಡೂ ಕುಟುಂಬದವರು ಅದ್ಧೂರಿಯಾಗಿ ಏರ್ಪಡಿಸಿದ್ದರು. ಮಂಗಳವಾರ (ಸೆ.19) ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ಬಂದರು ಮತ್ತು ಆ ದಿನ ಅವರ ಮೊದಲ ರಾತ್ರಿಯಾಗಿತ್ತು.
ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಕೋಣೆಯಿಂದ ಹೊರಗೆ ಓಡಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳ ಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಚೆಂಗಲ್ಪಟ್ಟು ತಾಲೂಕು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್ಗೆ ಕಳುಹಿಸಿದೆ.
ಮಂಗಳವಾರ ರಾತ್ರಿ ಸರವಣನ್ ತನ್ನ ಪಾಲಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹನಿಮೂನ್ ಪ್ರವಾಸಕ್ಕಾಗಿ ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರದಿಂದಲೇ ಹನಿಮೂನ್ ಪ್ರವಾಸ ಆರಂಭಿಸಬೇಕಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಮೊದಲ ರಾತ್ರಿ ಸರವಣನ್ ಮುಖದಲ್ಲಿ ಯಾವುದೇ ಆತಂಕ ಅಥವಾ ದುಃಖದ ಲಕ್ಷಣಗಳು ಇರಲಿಲ್ಲ ಎಂದು ಪಾಲಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸರವಣನ್ ಸಾವು ತುಂಬಾ ನಿಗೂಢವಾಗಿದೆ. ಚೆಂಗಲಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಆಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ.