ಕೇರಳ: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ 10ನೇ ತರಗತಿ ಬಾಲಕನನ್ನು ಅಪಘಾತ ಮಾಡಿ ಕೊಲೆ ಮಾಡಿದ ಘಟನೆಯೊಂದು ಕೆರಳದಲ್ಲಿ ನಡೆದಿದೆ. ಮೃತ ಬಾಲಕನನ್ನು ಅದಿಶೇಖರ್ (15) ಎಂದು ಗುರುತಿಸಲಾಗಿದೆ.
ಸಂಬಂಧಿಕನೇ ಈತನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಅರುಣ್ ಕುಮಾರ್ ಹಾಗೂ ದೀಪಾ ಮಗನಾಗಿರುವ ಅದಿಶೇಖರ್,
ಆಗಸ್ಟ್ 31ರಂದು ಮೃತಪಟ್ಟಿದ್ದಾನೆ. ಈತ ಕತ್ತಕ್ಕಡ ಚಿನ್ಮಯ ಮಿನ್ ಸ್ಕೂಲ್ನಲ್ಲಿ 10ನೇ ತರಗತಿ ಓದುತ್ತಿದ್ದನು. ಈ ಘಟನೆ ಪುಳಿಂಕೋಡ್ ದೇವಸ್ಥಾನದ ಬಳಿ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಮೊದಲು ಇದೊಂದು ಅಪಘಾತ ಎಂದು ಬಿಂಬಿಸಿದ್ದರೂ, ಸಿಸಿಟಿಯಲ್ಲಿ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಅಪಘಾತ ಅಲ್ಲ ಕೊಲೆ ಎಂಬುದು ಬಯಲಾಗಿದೆ.
ನಡೆದಿದ್ದೇನು..?: ಅದಿಶೇಖರ್ ಸೈಕಲ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ತನಿಖೆ ವೇಳೆ ಪೊಲೀಸರಿಗೆ ಬಾಲಕನ ಸಂಬಂಧಿಕರ ಕಾರು ಗುದ್ದಿರುವುದಾಗಿ ತಿಳಿದುಬಂತು. ಅಪಘಾತದಲ್ಲಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇದಾದ ಬಳಿಕ ಪೊಲೀಸರು ಘಟನೆ ನಡೆದ ಅಕ್ಕಪಕ್ಕದ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಪ್ರಿಯರಾಜನ್ ಬಾಲಕನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಘಟನೆ ನಡೆದು ವಾರ ಕಳೆದರೂ ಪೊಲೀಸರು ಪ್ರಿಯರಾಜ್ನನ್ನು ಬಂಧಿಸಿರಲಿಲ್ಲ. ಹೀಗಾಗಿ ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯಲು ಕೆಲ ಉನ್ನತ ಅಧಿಕಾರಿಗಳು ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.