ವಿಜಯಪುರ : ವೇದಿಕೆಯಲ್ಲಿ ನಾಟಕ ಮಾಡುತ್ತಿದ್ದಾಗಲೇ ಯುವ ಕಲಾವಿದನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಾಟಕದ ವೇಳೆ ಸಹ ಕಲಾವಿದೆ ಜೊತೆಗೆ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದಾಗ ಏಕಾಏಕಿ ವೇದಿಕೆಯಲ್ಲಿ ಕುಸಿದು ಬಿದ್ದ ಯುವಕ ಅಲ್ಲೇ ಪ್ರಾಣತ್ಯಾಗ ಮಾಡಿದ್ದಾನೆ.
ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ನಾಟಕದ ವೇಳೆ ಕಲಾವಿದ ಕುಸಿದು ಬಿದ್ದು ಸಾವನ್ನಪ್ಪಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ಯುವ ಕಲಾವಿದನನ್ನು ಶರಣು ಬಾಗಲಕೋಟೆ (24) ಎಂದು ಗುರುತಿಸಲಾಗಿದ್ದಯ, ಈತ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇಲ್ಲಿನ ಗ್ರಾಮ ದೇವರ ಜಾತ್ರೆ ಹಿನ್ನೆಲೆ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಊರವರು ಸೇರಿ ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ಎಂಬ ನಾಟಕ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.
ಹೀಗಾಗಿ ತಾನು ಸಹ ನಾಟಕದಲ್ಲಿ ಡ್ಯಾನ್ಸ್ ಮಾಡಲು ಶರಣು ಬಾಗಲಕೋಟೆ ವೇದಿಕೆ ಏರಿದ್ದರು. ಆದರೆ ಸಹ ಕಲಾವಿದೆ ಜೊತೆ ನೃತ್ಯ ಮಾಡುತ್ತಿದ್ದಾಗ ವೇದಿಕೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಕೇವಲ 24 ವರ್ಷದ ಶರಣು ಬಾಗಲಕೋಟೆ ಇತ್ತೀಚೆಗಷ್ಟೇ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದರು. ಇದೀಗ ತಾನು ನಾಟಕದಲ್ಲಿ ಡಾನ್ಸ್ ಮಾಡಲು ವೇದಿಕೆ ಏರಿದ್ದ ವೇಳೆ ಸಾವನ್ನಪ್ಪಿರೋದು ಕುಟುಂಬಸ್ಥರಿಗೆ ಶಾಕ್ ತಂದಿದೆ.