ಬೆಂಗಳೂರು: ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಶೃಂಗಾರ್ನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಂಡ್ಯದ ಶೃಂಗಾರ್, ಆಸ್ಪತ್ರೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ.
19 ವರ್ಷ ವಯಸ್ಸಿನ ಯುವತಿ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೀದರ್ ಜಿಲ್ಲೆಯ ಯುವತಿ, ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಸಹಾಯಕನಾಗಿದ್ದ ಆರೋಪಿ, ರೋಗಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯುವುದು ಹಾಗೂ ಇತರೆ ಕೆಲಸ ಮಾಡುತ್ತಿದ್ದ.’
‘ಯುವತಿಯನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಆರೋಪಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಗತಿಯನ್ನು ಯುವತಿ ಪೋಷಕರಿಗೆ ತಿಳಿಸಿದ್ದರು. ಬಳಿಕ, ಆಸ್ಪತ್ರೆ ಆಡಳಿತ ಮಂಡಳಿಗೆ ವಿಷಯ ಗೊತ್ತಾಗಿತ್ತು’ ಎಂದು ಮೂಲಗಳು ತಿಳಿಸಿವೆ.