ಧಾರವಾಡ ಜಿಲ್ಲೆ : ಮಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯುವಕನೊಬ್ಬನನ್ನು ಕೊಲೆ ಮಾಡಿ ನಂತರ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ನಗರದಲ್ಲಿ ನಡೆದಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಪರಸಪ್ಪ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಆರೋಪಿಯು ಹುಬ್ಬಳ್ಳಿಯ ಸಿಲ್ವರ್ ಟೌನ್ ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮೌಲಾಲಿ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ. ಸದ್ಯ ಆತ ನಗರದ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದು, ಗಾರೆ ಕೆಲಸ ಮಾಡುವುದಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದ. ಪರಸಪ್ಪ ಕುಟುಂಬ ಸಹ ಗಾರೆ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿತ್ತು. ಮೌಲಾಲಿ ಸಹ ಪರಸಪ್ಪನ ಕುಟುಂಬದ ಜೊತೆ ಗಾರೆ ಕೆಲಸ ಮಾಡಿಕೊಂಡಿದ್ದ. ಎಲ್ಲರೂ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದರು. ಮೌಲಾಲಿ, ಪರಸಪ್ಪನ ವಿವಾಹಿತ ಮಗಳ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ. ಇದು ಪರಸಪ್ಪನಿಗೆ ಗೊತ್ತಾಗಿದ್ದು, ಇದರಿಂದ ರೊಚ್ಚಿಗೆದ್ದು ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.