ವಿಜಯಪುರ: ಕಾಮಗಾರಿ ಬಿಲ್ ಪಾವತಿ ಸಂಬಂಧ ಗುತ್ತಿಗೆದಾರನಿಂದ ₹ 5 ಲಕ್ಷ ಲಂಚ ತೆಗೆದುಕೊಳ್ಳುವಾಗ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ(ಯುಕೆಪಿ) ಪುನರ್ವಸತಿ, ಪುನರ್ ನಿರ್ಮಾಣ(ಆರ್ ಅಂಡ್ ಆರ್) ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ಎಇಇ) ಶಿವಪ್ಪ ಎಸ್.ಮಂಜಿನಾಳ ಮತ್ತು ಅವರ ಕಾರು ಚಾಲಕ ಬಸನಗೌಡ ಗೌಡರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯುಕೆಪಿ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು ₹5.38 ಕೋಟಿ ಬಿಲ್ನಲ್ಲಿ ಕೊನೆಯ ಕಂತು ₹32 ಲಕ್ಷ ಬಿಲ್ ಪಾಸ್ ಮಾಡಲು ಎಇಇ ಮಂಜಿನಾಳ ₹ 16 ಲಕ್ಷ ಲಂಚ ಕೇಳಿದ್ದರು. ಕೊನೆಗೆ ₹ 5 ಲಕ್ಷ ಲಂಚದ ಹಣಕ್ಕೆ ಒಪ್ಪಿಕೊಂಡಿದ್ದರು. ಈ ಸಂಬಂಧ ಗುತ್ತಿಗೆದಾರ ನೀಡಿದ ₹ 5 ಲಕ್ಷ ಲಂಚವನ್ನು ತೆಗೆದುಕೊಂಡು, ಆಲಮಟ್ಟಿಯಲ್ಲಿರುವ ತಮ್ಮ ಕೊಠಡಿಗೆ ಹೋದಾಗ ಹಿಂಬಾಲಿಸಿ ದಾಳಿ ನಡೆಸಿ, ಲಂಚದ ಹಣದ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವಿಜಯಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಹನುಮಂತರಾಯ ತಿಳಿಸಿದ್ದಾರೆ.