ಬೆಂಗಳೂರು: ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ ಭಾರಿ ಕಡಿಮೆ ಆಗಿದೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಆಗಸ್ಟ್ ನಲ್ಲಿ ಶೇಕಡ 10 ರಿಂದ 15 ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ.
ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಬಿಯರ್ ಗೆ ಶೇಕಡ 10ರಷ್ಟು, ಉಳಿದ ಮದ್ಯಕ್ಕೆ ಶೇಕಡ 20ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮಾರಾಟದಲ್ಲಿ ಭಾರಿ ಕುಸಿತ ಆಗಿದೆ.
ಬಿಯರ್ ಹೊರತಾಗಿ ಉಳಿದ ಮದ್ಯ ಮಾರಾಟ ಪ್ರಮಾಣ ಕಳೆದ ವರ್ಷಕ್ಕಿಂತ ಶೇಕಡ 14.25ರಷ್ಟು ಕಡಿಮೆಯಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ತಿಳಿಸಿದೆ.
ಸ್ಕಾಚ್ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರಾಂಡ್, ಪ್ರೀಮಿಯಂ ಬ್ರಾಂಡ್ ಸೇವಿಸುತ್ತಿದ್ದವರು ಅದಕ್ಕಿಂತ ಕೆಳಗಿನ ಬ್ರಾಂಡ್ ಖರೀದಿಸುತ್ತಿದ್ದಾರೆ. ಕೆಲವೆಡೆ ನಕಲಿ ಮದ್ಯ ಮಾರಾಟ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದೆ ಎಂದು ಹೇಳಲಾಗಿದೆ.
ಜುಲೈನಲ್ಲಿ 3,556.25 ಕೋಟಿ ರೂ. ಮೌಲ್ಯದ ಬಿಯರ್ ಸೇರಿ ಎಲ್ಲ ಬಗೆಯ ಮದ್ಯ ಮಾರಾಟವಾಗಿದೆ. ಆಗಸ್ಟ್ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
2022 -23ರ ಆಗಸ್ಟ್ ತಿಂಗಳ ಮೊದಲ 15 ದಿನಗಳಲ್ಲಿ 25.80 ಲಕ್ಷ ಬಾಕ್ಸ್ ಗಳಷ್ಟು ಮದ್ಯ, 10.34 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ವರ್ಷ ಆಗಸ್ಟ್ 1ರಿಂದ 15 ರವರೆಗೆ 21.87 ಲಕ್ಷ ಬಾಕ್ಸ್ ಮದ್ಯ, 12.52 ಲಕ್ಷ ಬಿಯರ್ ಮಾರಾಟವಾಗಿದೆ. ಬಿಯರ್ ಮಾರಾಟ ಹೆಚ್ಚಾಗಿದ್ದು, ಉಳಿದ ಮದ್ಯ ಮಾರಾಟ ಪ್ರಮಾಣ ಕುಸಿತವಾಗಿದೆ.