ಬೇಳಗಾವಿ: ಅನಾಮಧೇಯ ವ್ಯಕ್ತಿಯೊಬ್ಬ ಭಾನುವಾರ(ಅ.8) ನನಗೆ ಕರೆ ಮಾಡಿ, ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹ, ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಮತ್ತು ನನ್ನ ವಸತಿ ಗೃಹದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
ಹಿಂಡಲಗಾ ಕೇಂದ್ರ ಕಾರಾಗೃಹದ ಹಿರಿಯ ವೀಕ್ಷಕರಾದ ಜಗದೀಶ ಗಸ್ತಿ, ಎಸ್.ಎಂ. ಗೋಟೆ ಅವರ ಪರಿಚಿತನೆಂದು ಹೇಳಿಕೊಂಡ ಆತ, ಮೂರು ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿದ್ದಾನೆ.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಲಭೆ ಸೃಷ್ಟಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡುತ್ತೇನೆ ಎಂದೂ ಬೆದರಿಕೆ ಒಡ್ಡಿದ್ದಾನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
‘ತಾನು ಕುಖ್ಯಾತ ರೌಡಿ ಬನ್ನಂಜೆ ರಾಜಾನಿಗೆ ಸಹಾಯ ಮಾಡಿರುವುದಾಗಿಯೂ ಹೇಳಿದ್ದಾನೆ. ಈ ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹದ ಆಡಳಿತಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಟಿ.ಪಿ. ಶೇಷ ತಿಳಿಸಿದ್ದಾರೆ