ಬೆಂಗಳೂರು: ಕನ್ನಡ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಯುರೋಪ್ ಪ್ರವಾಸ ಮುಗಿಸಿ ಅಕ್ಟೋಬರ್ 30ರಂದು ಮನೆಗೆ ಬಂದಿದ್ದ ವೇಳೆ ಮನೆಯಲ್ಲಿ ಕಳ್ಳತನವಾಗಿದ್ದು ಗಮನಕ್ಕೆ ಬಂದ ತಕ್ಷಣ ಬ್ರಹ್ಮೇಶ್ ಕುಟುಂಬ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ತಿಂಗಳ ಬಳಿಕ ನೇಪಾಳಿ ಮೂಲದ ಪಾರ್ವತಿಶಾಹಿ, ಶಾಲದ ಶಾಹಿ, ನಾರಾ ಬಹದ್ದೂರ್ ಶಾಹಿ, ಸ್ವಸ್ತಿಕ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ ಹಾಗೂ ಉಪೇಂದ್ರ ಬಹದ್ದೂರ್ ಶಾಹಿಯನ್ನು ಬಂಧಿಸಿದ್ದಾರೆ.
ಬ್ರಹ್ಮೇಶ್ ಮನೆಯ ಸಮೀಪದಲ್ಲಿ ಕೆಲಸಕ್ಕಿದ್ದ ಈ ನೇಪಾಳಿ ಗ್ಯಾಂಗ್ ಮೂರು ತಿಂಗಳ ಮೊದಲೇ ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ನಿರ್ಮಾಣ ಹಂತದ ಕಟ್ಟಡದಿಂದ ಬ್ರಹ್ಮೇಶ್ ಮನೆಗೆ ಜಂಪ್ ಮಾಡಿ ಕಳ್ಳತನ ಮಾಡಿದ್ದಾರೆ.
ರಾಕ್ಲೈನ್ ವೆಂಕಟೇಶ್ ತಮ್ಮ ಬ್ರಹ್ಮೇಶ್ ಕುಟುಂಬ ಯುರೋಪ್ ಪ್ರವಾಸದಲ್ಲಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದು, ಇದರಿಂದ ಮನೆಯಲ್ಲಿ ಯಾರು ಇಲ್ಲ ಎಂಬುದು ನೇಪಾಳಿ ಗ್ಯಾಂಗ್ ಗೆ ತಿಳಿದು ದರೋಡೆಗೆ ಮುಂದಾಗಿರುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತರಿಂದ ಕೋಟ್ಯಂತರ ಮೌಲ್ಯದ 3.1 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಮೇಲೆ ಸುಮಾರು 15 ಪ್ರಕರಣ ದಾಖಲಾಗಿದ್ದು, ಅಂತರರಾಜ್ಯ ಮನೆಗಳ್ಳನಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.