ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಬಹ್ಜೋಯ್ ಪ್ರದೇಶ ಯೊಂದರಲ್ಲಿ ಆರು ತಿಂಗಳ ಹಸುಗೂಸಿನ ಮೇಲೆ ಆಕೆಯ ನೆರೆಹೊರೆಯಲ್ಲೇ ತಂಗಿದ್ದ 20 ವರ್ಷದ ಯುವಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಸಂತ್ರಸ್ತೆಯ ತಾಯಿ ಬದೌನ್ನಲ್ಲಿ ವಾಸಿಸುತ್ತಿದ್ದು, ಕಳೆದ ವಾರ ಸಂಭಾಲ್ನಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಲು ತಮ್ಮ ಹಸುಗೂಸಿನೊಂದಿಗೆ ಬಂದಿದ್ದರು. ಮಹಿಳೆಯ ದೂರದ ಸಂಬಂಧಿಯೂ ಆಗಿರುವ ಸಂಜೀವ್ ಎಂಬಾತ ಮನೆಯವರನ್ನು ಮಾತನಾಡಿಸಲೆಂದು ಅಲ್ಲಿಗೆ ಬಂದಿದ್ದಾನೆ. ಈ ವೇಳೆ, ಮಗುವನ್ನು ಆಟವಾಡಿಸುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ, ಮಗು ಜೋರಾಗಿ ಅಳುವುದನ್ನು ಕೇಳಿದ ತಾಯಿ ಸಂಜೀವ್ ಮನೆಗೆ ಧಾವಿಸಿದ್ದಾರೆ.
ಅಲ್ಲಿ ಆಕೆಯ ಮಗಳು ಬೆತ್ತಲೆಯಾಗಿ ಮತ್ತು ರಕ್ತಸ್ರಾವದಿಂದ ಬಳಲುತ್ತಿರುವುದನ್ನು ಕಂಡಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಡಲೇ, ಆರೋಪಿಯನ್ನು ಮನೆಯವರು ಮತ್ತು ನೆರೆಹೊರೆಯವರು ಹಿಡಿದಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಈಮಧ್ಯೆ, ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಕಂದಮ್ಮನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚುವರಿ ಎಸ್ಪಿ ಶಿರೀಶ್ ಚಂದ್ರ ಮಾತನಾಡಿ, ‘ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆತನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವಿವಾಹಿತ ಮತ್ತು ನಿರುದ್ಯೋಗಿಯಾಗಿರುವ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಸಂಭಾಲ್ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.