ಕೊಪ್ಪಳ: ಉದ್ಯಮಿ ಗೋವಿಂದ ಬಾಬು ಪೂಜಾರಿ ಬಿಜೆಪಿ ಎಂಎಲ್ ಎ ಟಿಕೆಟ್ ಆಸೆಗಾಗಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿರುವ ಮಧ್ಯೆಯೇ ಇದೇ ಮದರಿಯಲ್ಲಿ ಇನ್ನೋರ್ವ ಬಿಜೆಪಿ ನಾಯಕ ಕೂಡ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ನ್ನು ತನ್ನ ಪತ್ನಿ ಗಾಯತ್ರಿ ತಿಮ್ಮಾರೆಡ್ಡಿಗೆ ಕೊಡಿಸಲು ಜಿ.ತಿಮ್ಮಾರೆಡ್ದಿ ಗಿಲ್ಲೆಸೂಗುರ್ ಭಾರಿ ಪ್ರಯತ್ನ ಮಾಡಿದ್ದರು. ಆದರೆ ಚೈತ್ರಾ ಕುಂದಾಪುರ ಗ್ಯಾಂಗ್ ಮಾದರಿಯಲ್ಲಿಯೇ ಮತ್ತೊಂದು ಗ್ಯಾಂಗ್ ಜಿ.ತಿಮ್ಮಾರೆಡ್ದಿಗೆ ಟಿಕೆಟ್ ಆಸೆ ತೋರಿಸಿ 21 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದೆ.
ಕನಕಗಿರಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ದಿ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಪತ್ನಿ ಗಾಯತ್ರಿಗೆ ಟಿಕೆಟ್ ಕೊಡಿಸಲು ಜಿ.ತಿಮ್ಮಾರೆಡ್ಡಿ ಸರ್ವಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ದೆಹಲಿ ಮೂಲದ ವಿಶಾಲ್ ನಾಗ್ ಹಾಗೂ ಬೆಂಗಳೂರಿನ ಜೀತು, ಗೌರವ್ ಎಂಬುವವರು ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿ ಬರೋಬ್ಬರಿ 21 ಲಕ್ಷ ರೂಪಾಯಿ ಹಣ ಪಡೆದು ಪಂಗನಾಮ ಹಾಕಿದ್ದಾರೆ.
ವಿಶಾಲ್ ನಾಗ್ ಎಂಬಾತ ನಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ. ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ. ನನಗೆ ಅಮಿತ್ ಶಾ ಪರಿಚಯವಿದೆ. ಹಾಗಾಗಿ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಮುಂಚೂಣಿಯಲ್ಲಿ ಬರುವಂತೆ ಮಾಡುತ್ತೇವೆ ಎಂದು ನಂಬಿಸಿ ಹಣ ಪಡೆದಿದ್ದರು ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಸಿಗದಿದ್ದಾಗ ಮೋಸ ಹೋಗಿದ್ದು ಗೊತ್ತಾಗಿದೆ. ಈ ಬಗ್ಗೆ ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ತಿಮ್ಮಾರೆಡ್ಡಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.