ಬೆಂಗಳೂರು: ಹೆಸರಘಟ್ಟದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿ ಮುನಿರಾಜು ಅಲಿಯಾಸ್ ಅಪ್ಪಿಯನ್ನು (34) ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬಂಧಿತ ಮನಿರಾಜು, ಅಪರಾಧ ಹಿನ್ನೆಲೆಯುಳ್ಳವ. ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿ ಜೈಲಿಗೂ ಹೋಗಿ ಬಂದಿದ್ದ.
ಐಷಾರಾಮಿ ಜೀವನ ಹಾಗೂ ದುಶ್ಚಟಗಳಿಗೆ ಹಣ ಹೊಂದಿಸಲು ಕಳ್ಳತನ ಮುಂದುವರಿಸಿದ್ದ’ ಎಂದು ಪೊಲೀಸರು ಹೇಳಿದರು.
‘ನ. 9ರಂದು ಬೆಳಿಗ್ಗೆ ಹೆಸರಘಟ್ಟದ ಮನೆಯೊಂದರ ಬೀಗ ಮುರಿದು ಒಳನುಗ್ಗಿದ್ದ ಆರೋಪಿ, ಚಿನ್ನಾಭರಣ ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದ. ಮನೆ ಮಾಲೀಕರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.
‘ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸುಳಿವು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಕಳ್ಳತನ ಮಾಡಿದ್ದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡ. ಈತನಿಂದ ₹ 7.96 ಲಕ್ಷ ಮೌಲ್ಯದ 122 ಗ್ರಾಂ ಚಿನ್ನಾಭರಣ, ₹ 1.25 ಲಕ್ಷ ನಗದು, ದ್ವಿಚಕ್ರ ವಾಹನ ಹಾಗೂ ಕಬ್ಬಿಣದ ರಾಡ್ ಜಪ್ತಿ ಮಾಡಲಾಗಿದೆ’ ಎಂದರು.
‘ಗಿರಿನಗರ, ಹನುಮಂತನಗರ, ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದರು.