ಧಾರವಾಡ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 8 ರಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಘಟನೆ ನಡೆದಿತ್ತು.
ಯುವಕ ಹಾಗೂ ಯುವತಿ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಆರೋಪಿ ಯುವಕ ಕಟರ್ನಿಂದ ಯುವತಿಗೆ ಇರಿದಿದ್ದ.
ಬಿಬಿ ನಿಸ್ಬಾ ಡಂಬಳ (20) ಹಲ್ಲೆಗೊಳಗಾಗಿದ್ದ ಯುವತಿಯಾಗಿದ್ದು, ಆರೋಪಿ ಇಮಾಮಜಾಫರ್ ಯುವತಿಯ ಕುತ್ತಿಗೆ ಹಾಗೂ ಕೈಗೆ ಇರಿದಿದ್ದ. ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಸ್ಥಳೀಯರಿಗೆ ಸಿಕ್ಕಿದ್ದು, ನಂತರ ಪೊಲೀಸರನ್ನು ಕರೆಸಿದ್ದಾರೆ. ಬಳಿಕ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ನೀಡಿದ ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧಾರವಾಡ ಕುರಬರ ಓಣಿಯ ನಿವಾಸಿಯಾಗಿರುವ ಬಿಬಿ ಹಾಗೂ ಇಮಾಮಜಾಫರ್ ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಬಿಬಿ ಬೇರೆ ಯುವಕನ ಜೊತೆ ಮೊಬೈಲ್ನಲ್ಲಿ ಮಾತನಾಡುವುದನ್ನು ಇಮಾಮಜಾಫರ್ ಗಮನಿಸಿದ್ದ. ಹೀಗಾಗಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಟರ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದೀಗ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.