ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆಂದು ಬಂದಿದ್ದ ವ್ಯಕ್ತಿಯನ್ನು ಕಳ್ಳನೆಂದು ಶಂಕಿಸಿ ಹತ್ಯೆ ಮಾಡಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬಾಪೂಜಿ ಲೇಔಟ್ ನಿವಾಸಿ ಖಾದಿರ್ ಅಹಮದ್ (28) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಾ ಲೇಔಟ್ ನಿವಾಸಿ ರಾಜೇಂದ್ರ ಪ್ರಸಾದ್ ಎಂಬ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿ ರಾಜೇಂದ್ರ ಕಟ್ಟಡ ನಿರ್ಮಾಣ ಮಾಡಿಸುತ್ತಿದ್ದು, ನಿರ್ಮಾಣ ಕೆಲಸಕ್ಕಾಗಿ ಅಹ್ಮದ್ ಅವರು ಇಬ್ಬರು ಕಾರ್ಮಿಕರೊಂದಿಗೆ ಸ್ಥಳಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಆರೋಪಿ ರಾಜೇಂದ್ರ ಸ್ಥಳಕ್ಕೆ ಬಂದು ಅಹ್ಮದ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.
ಜಟಾಪಟಿ ವೇಳೆ ಅಹ್ಮದ್ ಚಾಕು ತೆಗೆದು ರಾಜೇಂದ್ರ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ತಪ್ಪಿಸಿಕೊಂಡಿದ್ದಾರೆ. ಬಳಿಕ ಸ್ಥಳದಲ್ಲಿ ಅಹ್ಮದ್ ಅವರ ಇಬ್ಬರು ಸ್ನೇಹಿತರು, ಕಟ್ಟಡ ನಿರ್ಮಾಣಕ್ಕೆಂದು ಸ್ಥಳದಲ್ಲಿ ಇರಿಸಲಾಗಿದ್ದು ವಸ್ತುಗಳನ್ನು ರಾಜೇಂದ್ರ ಅವರ ಮೇಲೆ ಎಸೆಯಲು ಆರಂಭಿಸಿದ್ದಾರೆ.
ಇದರಿಂದ ಕೆಂಡಾಮಂಡಲಗೊಂಡ ರಾಜೇಂದ್ರ ಅವರು ಅಹ್ಮದ್ ಅವರ ಬಳಿಯಿದ್ದ ಚಾಕು ಕಸಿದುಕೊಂಡು ಅಹ್ಮದ್ ಅವರ ಮೇಲೆಯೇ ದಾಳಿ ಮಾಡಿದ್ದಾರೆ. ಈ ವೇಳೆ ಅಹ್ಮದ್ ಅವರ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ರಾಜೇಂದ್ರ ಅವರು ಸ್ಥಳದಲ್ಲಿದ್ದ ಇತರೆ ಕಾರ್ಮಿಕರೊಂದಿಗೆ ಸೇರಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಹ್ಮತ್ ಸಾವನ್ನಪ್ಪಿದ್ದಾರೆ. ಮೆಡಿಕೋಲೀಗಲ್ ಪ್ರಕರಣವಾಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.