ಬೆಳಗಾವಿ : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬೆಳಗಾವಿಯ (Belagavi) ಗೋಕಾಕ (gokak) ಪಟ್ಟಣದಲ್ಲಿ ನಡೆದಿದೆ. ಗೋಕಾಕ್ ಪಟ್ಟಣದ ಆದಿಜಾಂಬವ ನಗರದ ಶಾನೂರು ಪೂಜಾರಿ (27) ಕೊಲೆಯಾದ ಯುವಕ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈತನ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶಾನೂರು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅದೇ ಕಾಲೋನಿಯ ಯುವಕರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಕೆರಳಿದ ಮೃತ ಯುವಕನ ಕುಟುಂಬಸ್ಥರು ಆರೋಪಿ ಯುವಕರ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಬೈಕ್, ಕಾರಿಗೆ ಹಾನಿಯಾಗಿದೆ. ನೂರಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಕಾಕ್ ಶಹರ್ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿದೆ.
ಬಳಿಕ ಆರೋಪಿಗಳನ್ನು ಬಂಧಿಸುವಂತೆ ಮೃತನ ಕುಟುಂಬಸ್ಥರು ಪಟ್ಟು ಹಿಡಿದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಗೋಕಾಕ್ ಶಹರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.