ಬೆಂಗಳೂರು : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಇಲ್ಲ ಎಂದು ಸರಕಾರದ ವಿರುದ್ಧ ಶಾಸಕ ಯತ್ನಾಳ ಆರೋಪ ಮಾಡಿದ್ದಾರೆ..
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಇಲ್ಲವೇ ಇಲ್ಲ. ತಮ್ಮ ಗ್ಯಾರಂಟಿ ಯೋಜನೆ ವೈಫಲ್ಯವಾಗದಂತೆ ನೋಡಿಕೊಳ್ಳಲು ರೈತಪರ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಇದೊಂದು ನಿರುಪಯುಕ್ತ ಸರ್ಕಾರವಾಗಿದೆ ಎಂದರು. ಬರಗಾಲ ಕಾಮಗಾರಿ ನಡೆಯುತ್ತಿಲ್ಲ. ಸಂಪುಟ ಸಚಿವರಲ್ಲಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ಸಿಗರು ಅಧಿಕಾರಿಗಳ ವರ್ಗಾವಣೆ ದಂಧೆಯ ಮೂಲಕ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಸರ್ಕಾರ ಗುಜರಾತಿನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಪುತ್ಥಳಿ ನಿರ್ಮಾಣ ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ರಾಜೀವ ಗಾಂಧಿ ಪುತ್ಥಳಿ ನಿರ್ಮಾಣ ಮಾಡಲು ಹೊರಟಿದೆ. ಇದರಿಂದ ರಾಷ್ಟ್ರಕ್ಕೆ ಯಾವುದೇ ಪ್ರಯೋಜನವಿಲ್ಲ. ಪ್ರವಾಸಿ ತಾಣವನ್ನಾಗಿ ಮಾಡಿದರೂ ಯಾರು ನೋಡುವುದಿಲ್ಲ, ಇದೆಲ್ಲವು ನಿರುಪಯುಕ್ತ ಎಂದರು.