ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಮುಂದುವರಿದಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ʼʼಶೀಘ್ರದಲ್ಲೇ ರಾಜ್ಯ ಬಿಜೆಪಿ ಮುಕ್ತವಾಗಲಿದೆʼʼ ಎಂದು ಭವಿಷ್ಯ ನುಡಿದಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆʼʼ ಎಂದು ಕಿಡಿಕಾರಿದರು.
ʼʼಬಿಜೆಪಿ ನಾಯಕರು ಭ್ರಮೆಯಲ್ಲಿ ಬದುಕುತ್ತಿದ್ದು, ಇದರಿಂದ ಮೊದಲು ಹೊರಬರಬೇಕು. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದರಿಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮನಸ್ಸಿಗೆ ಬಹಳ ಬೇಸರವಾಗಿದೆ. ಕೆಲವರು ಪತ್ರಿಕಾ ಹೇಳಿಕೆ ನೀಡುವ ಟೈಗರ್ಸ್ಗಳಾಗಿದ್ದಾರೆ. ಪಕ್ಷ ನನಗೆ ತಾಯಿ ಸಮಾನ ಆ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಅದನ್ನು ಖಂಡಿಸುತ್ತೇನೆ ಎಂದರು.
ʼʼಹಲವು ನಾಯಕರು ಮೋದಿ ಮುಖ ತೋರಿಸಿ ಗೆಲ್ಲುತ್ತೇವೆ ಎನ್ನುವ ಭ್ರಮಾಲೋಕದಲ್ಲಿದ್ದಾರೆ, ರಾಜ್ಯ ನಾಯಕರ ಕೊಡುಗೆ ಏನಿದೆ?, ಮೋದಿಯವರ ಜನಪ್ರಿಯ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಹೇಗೂ� ಮಾಡುತ್ತಿಲ್ಲ, ಬೇರೆ ರಾಜ್ಯದ ಮುಖ್ಯಮಂತ್ರಿ ಗಳು ಮೋದಿಯವರ ಕೆಲಸವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ, ನಮ್ಮ ರಾಜ್ಯದ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ಪ್ರಚಾರ ಮಾಡ್ತಾ ಇದ್ದಾರೆʼʼ ಎಂದು ವಾಗ್ದಾಳಿ ನಡೆಸಿದರು.