ವಿಜಯಪುರ: ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸ್ವಾಗತಿಸಿದ್ದಾರೆ. ಜೊತೆಗೆ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 25 ಕ್ಕೂ ಹೆಚ್ಚು ಲೋಕಸಭೆ ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಸ್ವಾಗತಿಸಿದರು.
ಬಿಜೆಪಿ ಯುವಕರಿಗೆ ಪ್ರೋತ್ಸಾಹ ಕೊಡುತ್ತದೆ ಎಂಬುದನ್ನು ಹೈಕಮಾಂಡ್ ಮತ್ತೆ ಎತ್ತಿ ತೋರಿಸಿದೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಬಿ. ಎಸ್. ವೈ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿದೆ. ಇನ್ನು ಮುಂದೆ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಯುವಕರು ಸಂಘಟಿತರಾಗಲಿದ್ದು, ರಾಜ್ಯದಲ್ಲಿ ಬಿಜೆಪಿ 25ಕ್ಕೂ ಹೆಚ್ಚು ಲೋಕಸಭೆ ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಅಲ್ಲದೇ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.